– ನೀರು ಕೊಡಿ ಎಂದು ಕೊರಳಿಗೆ ಕೈ ಹಾಕಿದವನಿಗೆ ಗೂಸ
ಬೆಂಗಳೂರು: ಕೊರೊನಾ ವಾರಿಯರ್ ರೀತಿ ನಕಲಿ ವೈದ್ಯನ ವೇಷ ಧರಿಸಿ ಮಹಿಳೆಯರ ಚಿನ್ನದ ಸರಗಳ್ಳತನ ಮಾಡುತ್ತಿದ್ದವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಿಕ್ಕಬಿದ್ದ ಕಳ್ಳನನ್ನು ಮೂರ್ತಿ ಎಂದು ಗುರತಿಸಲಾಗಿದೆ. ಈತ ವೈದ್ಯನ ರೀತಿ ಡ್ರೆಸ್ ಹಾಕಿಕೊಂಡು ಮಹಿಳೆಯರೇ ಇರುವ ಮನೆಗ ಹೋಗಿ, ಕೊರೊನಾ ಹೆಲ್ತ್ ಸರ್ವೇ ಎಂದು ಸುಳ್ಳು ಹೇಳುತ್ತಿದ್ದ. ನಂತರ ಅವರು ನಂಬಿದ್ದಾರೆ ಎಂದು ಗೊತ್ತಾದಾಗ ಮಹಿಳೆಯರಿಗೆ ನೀರು ತರಲು ಹೇಳಿ ಹಿಂದೆಯಿಂದ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದ.
ಇಂದು ವೈದ್ಯನ ಡ್ರೆಸ್ ತೊಟ್ಟು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸುಹಾಸಿನಿ ಮನೆಗೆ ಬಂದ ಮೂರ್ತಿ ನಾನು ಹೆಲ್ತ್ ವರ್ಕರ್, ನಿಮ್ಮ ಮನೆ ಮಾಹಿತಿ ನೀಡಿ ಎಂದು ಹೇಳಿದ್ದಾನೆ. ಇವನ ಕಪಟ ನಾಟಕವನ್ನು ನಂಬಿದ ಮಹಿಳೆ ಸರಿ ಎಂದು ಹೇಳಿದ್ದಾರೆ. ಆಗ ತಕ್ಷಣ ಆಕೆಯ ಬಳಿ ನೀರು ಕುಡಿಯಬೇಕು ನೀರು ಕೊಡಿ ಎಂದು ಕೇಳಿದ್ದಾನೆ. ಆಗ ಮಹಿಳೆ ನೀರು ತರಲು ಹೋದಾಗ ಹಿಂದೆಯಿಂದ ಮನೆಯೊಳಗೆ ಹೋಗಿ ಸರವನ್ನು ಕಿತ್ತುಕೊಂಡು ಓಡಿದ್ದಾನೆ.
ಆಗ ತಕ್ಷಣ ಮಹಿಳೆ ಕಿರುಚಿಕೊಂಡಿದ್ದಾಳೆ. ಆತ ಸ್ಥಳೀಯರು ಎಚ್ಚೆತ್ತು ಮೂರ್ತಿಯನ್ನು ಹಿಡಿದುಕೊಂಡು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಮೂರ್ತಿಯ ಈ ಎಲ್ಲ ನಾಟಕ ಮಹಿಳೆಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆತನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಮೂರ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.