ಚಿತ್ರದುರ್ಗ: ಹೊಟ್ಟೆಪಾಡಿಗಾಗಿ ಮನೆಮಂದಿಯನ್ನೆಲ್ಲ ಬಿಟ್ಟು ಕುರಿ ಸಾಕಣಿಕೆಗಾಗಿ ಊರಿಂದ ಊರಿಗೆ ಸಾಗುವ ಅಲೆಮಾರಿ ಕುರಿಗಾಯಿಗಳ ಬದುಕು ಕೊರೊನಾ ಮಹಾಮಾರಿಯಿಂದಾಗಿ ಭಾರೀ ಸಂಕಷ್ಟಕ್ಕೆ ಸಿಲುಕಿದೆ.
Advertisement
ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳ ವಿವಿಧ ಹಳ್ಳಿಗಳ ಕುರಿಗಾಹಿಗಳು ಹೊಟ್ಟೆಪಾಡಿಗಾಗಿ ಬೇರೆಯವರ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು, ಕುರಿಮಂದೆ ಕೂಡಿಕೊಂಡು, ರೈತರು ಕೊಡುವ ಧಾನ್ಯಗಳಿಂದ ಆಹಾರ ತಯಾರಿಸಿ ಹೊಟ್ಟೆ ತುಂಬಿಸಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಇದೀಗ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
Advertisement
ಕೊರೊನಾ ಹಾಗೂ ಲಾಕ್‍ಡೌನ್ ಇರುವುದರಿಂದ ರೈತರು ತಮ್ಮ ಹೊಲಗಳಲ್ಲಿ ಕುರಿಗಳನ್ನು ನಿಲ್ಲಿಸುತ್ತಿಲ್ಲ. ಹೀಗಾಗಿ ಕೊರೊನಾ ಲಾಕ್‍ಡೌನ್ ವೇಳೆ ಕುರಿಗಳ ಮೇವಿಗಾಗಿ ಕುರಿಗಾಯಿಗಳು ಪರದಾಡುವಂತಾಗಿದೆ. ಕುರಿಗಾರರು ನಿತ್ಯ ತಮ್ಮ ಕುರಿಗಳಿಗೆ ಕುಡಿಯುವ ನೀರಿನ ಅಭಾವ, ಮೇವು-ಆಹಾರ ಸಿಗದೇ ಚಡಪಡಿಸುತ್ತಿದ್ದಾರೆ. ಬೆಳಗಾದರೆ ಎತ್ತಕಡೆ ಹೋಗಬೇಕೆಂದು ಚಿಂತಿಸುತ್ತಿದ್ದಾರೆ. ಲಾಕ್‍ಡೌನ್ ಹಾಗೂ ಕೊರೊನಾ ಹಿನ್ನೆಲೆ ಯಾವ ಕಡೆಯೂ ಹೋಗಲಾಗದೆ. ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
Advertisement
Advertisement
ಮರಿ ಹಾಕಿದರೂ ತಾಯಿ ಕುರಿಯಲ್ಲಿ ಹಾಲಿನ ಅಭಾವ ಕಂಡು ಬರುತ್ತಿದ್ದು, ಕುರಿಗಳ ಬೆಲೆ ಚೆನ್ನಾಗಿದೆ ಮಾರಾಟ ಮಾಡೋಣ ಅಂದ್ರೆ ಲಾಕ್‍ಡೌನ್ ಹಿನ್ನೆಲೆ ಮಾರುಕಟ್ಟೆಗಳು ತೆರೆದಿಲ್ಲ. ಅಲ್ಲದೆ ಕೊರೊನಾ ಭೀತಿಯಿಂದ ಖರೀದಿಸುವವರು ಸಹ ಮಾರುಕಟ್ಟೆಗೆ ಧಾವಿಸುತ್ತಿಲ್ಲ. ಹೀಗಾಗಿ ಕುರಿಗಾಯಿಗಳು ಭಾರೀ ನಷ್ಟ ಅನುಭವಿಸುವಂತಾಗಿದೆ.
ಇಷ್ಟೆಲ್ಲ ಸಮಸ್ಯೆ ಅನುಭವಿಸುವ ಕುರಿಗಾಯಿಗಳ ಬಗ್ಗೆ ಪಶು ವೈದ್ಯಾಧಿಕಾರಿಗಳು ಸ್ವಲ್ಪವೂ ಅನುಕಂಪ ತೋರಿಸುತ್ತಿಲ್ಲ. ಸಮೀಕ್ಷೆಯನ್ನೂ ನಡೆಸುತ್ತಿಲ್ಲ, ಅನೇಕ ಬಾರಿ ಕುರಿಗಳು ವಿವಿಧ ರೋಗದಿಂದ ಸಾಯುತ್ತಿವೆ. ಆದರೆ ಪಶು ವೈದ್ಯಾಧಿಕಾರಿಗಳು ಈ ಬಗ್ಗೆ ತಲೆ ಕೆಡಸಿಕೊಳ್ಳುವುದಿಲ್ಲ. ಮಳೆ, ಗಾಳಿ, ಚಳಿಗೆ ನೂರಾರು ಕುರಿ ಮತ್ತು ಕುರಿಗಾಯಿಗಳು ತತ್ತರಿಸುತ್ತಿದ್ದಾರೆ. ಜೋಪಡಿ ನೆರಳಿನಲ್ಲಿ ಜೀವಿಸುವ ಇವರಿಗೆ ಯಾವುದೇ ಭದ್ರತೆ ಇಲ್ಲ, ಹೊಲಗದ್ದೆಗಳಲ್ಲಿ ಠಿಕಾಣಿ ಹೂಡುವ ಕುರಿಗಾಯಿಗಳ ಜೀವಕ್ಕೂ ರಕ್ಷಣೆ ಇಲ್ಲವಾಗಿದೆ.
ಅಲೆಮಾರಿ ಕುರಿಗಾಯಿಗಳಿಗೆ ಭೀಮಾ ಯೋಜನೆಯಡಿ ವಿಮೆ ಸೌಲಭ್ಯವಿರುತ್ತದೆ. ಆದರೆ ಬಹುತೇಕ ಕುರಿಗಾಯಿಗಳು ವಿಮಾ ಯೋಜನೆ ಅನುಕೂಲ ಪಡೆದಿಲ್ಲ. ಹೀಗಾಗಿ ವಲಸೆ ಕುರಿಗಾಯಿಗಳ ಬದುಕು ಅತಂತ್ರ ಸ್ಥಿತಿಯಲ್ಲಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಹೀಗಾಗಿ ಸರ್ಕಾರ ಇವರಿಗೆ ಸೂಕ್ತ ನೆರವು ನೀಡಬೇಕಿದೆ.
ಕಳೆದ ಒಂದು ವರ್ಷದಿಂದ ಉತ್ತಮ ಮಳೆಯಾದರೂ ಕುರಿಗಾಯಿಗಳ ಬದುಕು ಮಾತ್ರ ಕೊರೊನಾ ಮಹಾಮಾರಿಯ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದೆ. ಮಳೆಯೇ ಇರಲಿ, ಬಿಸಿಲೇ ಇರಲಿ, ಕುರಿಗಳ ಸಾಕಣಿಕೆಗಾಗಿ ಮೇವು ಹಾಗೂ ಮಂದೆ ಕೂಡುವ ಕಾಯಕ, ಹರಸಿ ಸಾಗುವ ಅಲೆಮಾರಿಗಳಿಗೆ ಲಾಕ್‍ಡೌನ್ ಶಾಪವಾಗಿ ಪರಿಣಮಿಸಿದೆ. ಊರಿಂದ ಊರಿಗೆ ಹೋಗುವ ಈ ಕುರಿಗಾಯಿಗಳು, ಬೇರೆ ಊರಿಂದ ಬಂದಿದ್ದಾರೆಂದರೆ ಕುರಿಗಳ ಸಹಿತ ಊರೊಳಗೆ ಪ್ರವೇಶಿಸೋದಕ್ಕೂ ಹರಸಾಹಸ ಪಡಬೇಕು. ಗ್ರಾಮ ಪ್ರವೇಶಿಸಿದರೂ ನೆಮ್ಮದಿ ಇಲ್ಲದ ಬದುಕು ಸಾಗಿಸಬೇಕು. ಆ ಊರಿಗೆ ಕೊರೊನಾ ಎಂಟ್ರಿ ಕೊಟ್ಟರೆ ಈ ಕುರಿಗಾಯಿಗಳೇ ಹೊಣೆಯಾಗಬೇಕು.