ಮಡಿಕೇರಿ: ಕೊರೊನಾ ಮೂರನೇ ಅಗಸ್ಟ್ ತಿಂಗಳಲ್ಲಿ ರಾಜ್ಯಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇನ್ನೊಂದು ಕಡೆ ರಾಜ್ಯದ ಪ್ರವಾಸಿತಾಣಗಳಲ್ಲಿ ಒಂದಾದ ಕೊಡಗು ಜಿಲ್ಲೆಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ರಾಜ್ಯ ಹಾಗೂ ಅಂತರ್ ರಾಜ್ಯದ ಜನರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಪ್ರವಾಸಿತಾಣಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದಾಗಿ ಕೊಡಗು ಜಿಲ್ಲೆ ಮತ್ತೆ ಕೊರೊನಾ ಹಾಟ್ ಸ್ಪಾಟ್ ಅಗುತ್ತಾ ಎಂಬ ಆತಂಕ ಇದೀಗ ಕಾಡುತ್ತಿದೆ.
ಮಡಿಕೇರಿ ಸಮೀಪದ ಅಬ್ಬಿ ಜಲಪಾತದ ಬಳಿ ನೂರಾರು ಪ್ರವಾಸಿಗರು ಅಗಮಿಸುತ್ತಿದ್ದು, ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ, ಮಾಸ್ಕ್ ಸಾಮಾಜಿಕ ಅಂತರಗಳನ್ನು ಮರೆತು ಎಂಜಾಯ್ ಮಾಡುತ್ತಿದ್ದಾರೆ. ಪಕ್ಕದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹೀಗೆ ನಾನಾ ಕಡೆಗಳಿಂದ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರಿಂದ ಕೊಡಗಿನಲ್ಲಿ ಮತ್ತಷ್ಟು ಸೋಂಕು ಹೆಚ್ಚಾಗುವ ಭಯ ಕಾಡುತ್ತಿದೆ.
ಕಳೆದ ಒಂದು ವಾರದಿಂದ ಕೊಡಗಿನಲ್ಲಿ ನೂರಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂದು ಕೊಡಗು ಜಿಲ್ಲೆಯಲ್ಲಿ 107 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಮಡಿಕೇರಿ 23, ಸೋಮವಾರಪೇಟೆ 42, ವಿರಾಜಪೇಟೆಯಲ್ಲಿ 42 ಪ್ರಕರಣಳು ಪತ್ತೆಯಾಗಿವೆ. ಇದುವರೆಗೆ ಜಿಲ್ಲೆಯಲ್ಲಿ 401 ಜನ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ 520 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವ್ ರೇಟ್ ಶೇ.3.46ರಷ್ಟು ಇದೆ. ಹೀಗಾಗಿ ಜಿಲ್ಲೆಯಲ್ಲಿ ಪ್ರವಾಸಿಗರಿಂದ ಸೋಂಕಿನ ಪ್ರಕರಣಗಳು ಹೆಚ್ಚಾಗುವ ಆತಂಕ ಇದೆ ಎಂದು ಸ್ಥಳೀಯರು ಭಯಭೀತರಾಗಿದ್ದಾರೆ.