ಉಡುಪಿ: ಮಹಾಮಾರಿ ಕೊರೊನಾ ದೈಹಿಕ ಮಾತ್ರವಲ್ಲದೆ, ಸಾಕಷ್ಟು ಸಮಸ್ಯೆಗಳನ್ನು ತಂದಿಟ್ಟು ವಿಶ್ವದ ಜನರನ್ನು ಜರ್ಜರಿತರನ್ನಾಗಿ ಮಾಡಿದೆ. ಈ ನಡುವೆ ಕುತೂಹಲಕಾರಿ ಅಂಶವೊಂದನ್ನು ಉಡುಪಿ ವೈದ್ಯರು ಬಿಚ್ಚಿಟ್ಟಿದ್ದು, ಕೊರೊನಾದಿಂದಾಗಿ ಎಚ್1ಎನ್1 ಅಂಟು ರೋಗ ಪ್ರಕರಣಗಳಲ್ಲಿ ಭಾರೀ ಇಳಿಕೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮಹಾಮಾರಿ ಕೊರೊನಾ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರವನ್ನು ಅಲ್ಲಾಡಿಸಿ ಬಿಟ್ಟಿದೆ. ಇದರ ಮಧ್ಯೆಯೇ ಕೊರೊನಾ ಹಲವು ಪಾಠಗಳನ್ನು ಸಹ ಕಲಿಸಿದೆ. ಕೊರೊನಾದಿಂದಾಗಿ ಜನ ಆರೋಗ್ಯದ ವಿಚಾರದಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಿದ್ದು, ಇದರಿಂದಾಗಿ ಇತರೆ ಅಂಟು ರೋಗಗಳ ಪ್ರಕರಣಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದಕ್ಕೆ ಉದಾಹರಣೆಯೇ ಎಚ್1ಎನ್1.
ಈ ಬಗ್ಗೆ ಉಡುಪಿ ಕೊರೊನಾ ನೋಡೆಲ್ ಆಫೀಸರ್ ಡಾ.ಪ್ರಶಾಂತ್ ಭಟ್ ಮಾಹಿತಿ ನೀಡಿದ್ದು, ಕೋವಿಡ್ ಬಂದ ನಂತರ ಜನಸಾಮಾನ್ಯರಲ್ಲಿ ಸಾಕಷ್ಟು ಪಾಸಿಟಿವ್ ಬದಲಾವಣೆಗಳು ಆಗಿದೆ. ಶ್ವಾಸಕೋಶ ಸಂಬಂಧಿ ಖಾಯಿಲೆಗಳಲ್ಲಿ ಗಣನೀಯ ಇಳಿಕೆಯಾಗಿದೆ. ಟಿಬಿ, ನಿಮೋನಿಯಾದಂತಹ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡಿದೆ. 2019ರಲ್ಲಿ ಉಡುಪಿ ಜಿಲ್ಲೆಯಲ್ಲಿ 476 ಎಚ್1ಎನ್1 ಪ್ರಕರಣಗಳು ದಾಖಲಾಗಿದ್ದವು. ಆದರೆ 2020ರಲ್ಲಿ ಈ ಸಂಖ್ಯೆ 124ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಬದಲಾವಣೆಗೆ ಕಾರಣ ಮಾಸ್ಕ್, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ನಿಯಮಿತವಾಗಿ ಸ್ಯಾನಿಟೈಸರ್ ಬಳಸುವುದು. ಜನ ಮಾಸ್ಕ್ ಹಾಕುವುದರಿಂದ ಅಸ್ತಮಾ, ಅಂಟುರೋಗ ಅಲರ್ಜಿ ಕಡಿಮೆಯಾಗಿದೆ. ಹೊಟ್ಟೆ ಸಂಬಂಧಿ ರೋಗಗಳು, ನೀರಿನಿಂದ ಬರುವ ರೋಗಗಳು ಕಾಣಿಸಿಕೊಳ್ಳುತ್ತಿಲ್ಲ. ಈ ನಡುವೆ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಖಾಸಗಿ ಆಸ್ಪತ್ರೆಗಳ ವರದಿಗಳು ಜಿಲ್ಲಾ ವೈದ್ಯಾಧಿಕಾರಿಗಳ ಕೈಸೇರಿದ್ದು, ಅಲ್ಲಿಯೂ ಸಾಂಕ್ರಾಮಿಕ ರೋಗಿಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎಂದು ವಿವರಿಸಿದ್ದಾರೆ.
ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲಿಸಿದರೆ ಒಳ್ಳೆಯವದು ಎಂದು ಸಾಬೀತಾಗಿದೆ. ಸರ್ಕಾರದ ಕೊರೊನಾ ನಿಯಮದಿಂದ ಶಾಲಾ ಮಕ್ಕಳಲ್ಲಿ ಕಂಡುಬರುವ ಶೀತ, ಕೆಮ್ಮು, ಜ್ವರ, ಕಜ್ಜಿ ಮತ್ತಿತರ ಅಂಟುರೋಗ ಸಂಪೂರ್ಣ ತಡೆಯಾಗಿದೆ. ಮಾಸ್ಕ್ ಸುಲಭವಾಗಿ ಸಿಗುವ ಮದ್ದು, ಯಾರೂ ಮಾಸ್ಕ್ ಬಗ್ಗೆ ತಾತ್ಸಾರ ಮಾಡದೆ ಬಳಸಿ ಎಂದು ಕೋವಿಡ್ 19 ವಿಶೇಷಾಧಿಕಾರಿ ಡಾ.ಪ್ರೇಮಾನಂದ ಹೇಳಿದರು.