– ಈಗಲೂ ಬಯೋಮೆಟ್ರಿಕ್ ಬಳಕೆ
ರಾಯಚೂರು: ಜಿಲ್ಲೆಯ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ. ಸೋಂಕು ಪೀಡಿತ ಕಾರ್ಮಿಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆತಂಕದಲ್ಲೇ ಉದ್ಯೋಗಕ್ಕೆ ಬರುತ್ತಿರುವ ಕಾರ್ಮಿಕರು ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದಿದ್ದು, ಅಗತ್ಯ ಕೋವಿಡ್ ಸುರಕ್ಷತಾ ಕ್ರಮ ಕೈಗೊಳ್ಳಲು ಆಗ್ರಹಿಸಿ ಹೋರಾಟ ನಡೆಸಿದ್ದಾರೆ.
ಕೋವಿಡ್-19 ಎರಡನೇ ಅಲೆಯಿಂದ ವಿದ್ಯುತ್ ಕೇಂದ್ರದಲ್ಲಿ ಸೂಕ್ತ ರಕ್ಷಣೆ ನೀಡಲು ಆಗ್ರಹಿಸಿ ಆರ್.ಟಿ.ಪಿಎಸ್ ಕಾರ್ಮಿಕರು ಹೋರಾಟ ನಡೆಸಿದ್ದಾರೆ. ಶೇಕಡಾ 50 ರಷ್ಟು ನೌಕರರನ್ನು ರೊಟೇಶನ್ ಮಾದರಿ ಜಾರಿ ತಂದು ಕೆಲಸ ಮಾಡಿಸಿಕೊಳ್ಳಬೇಕು, ಬಯೋಮೆಟ್ರಿಕ್ ಪದ್ದತಿಯನ್ನು ನಿಯಮಾನುಸಾರ ನಿಲ್ಲಿಸಬೇಕು ಎಂದು ಉದ್ಯೋಗಿಗಳು ಆಗ್ರಹಿಸಿದ್ದಾರೆ.
ಕೊರೊನಾ ಸೋಂಕಿನಿಂದ ಆರ್.ಟಿ.ಪಿಎಸ್‍ನ ಐದು ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈವರೆಗೆ ಶಕ್ತಿನಗರದಲ್ಲಿ 12ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಕಾರ್ಮಿಕರು ಆರೋಪಿಸಿಸಿದ್ದು, ಆರ್.ಟಿ.ಪಿಎಸ್ ನ 70 ಉದ್ಯೋಗಿಗಳು ಹಾಗೂ ಅವರ ಕುಟುಂಬಸ್ಥರು ಸೇರಿ 200 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ವೈಟಿಪಿಎಸ್ ನ 50 ಕ್ಕೂ ಹೆಚ್ಚು ನೌಕರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಆತಂಕಗೊಂಡಿರುವ ಕಾರ್ಮಿಕರು ರಕ್ಷಣೆಗೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.
ಆರ್.ಟಿ.ಪಿಎಸ್ ನಲ್ಲಿ ಒಟ್ಟು 2000 ಜನ ಮತ್ತು ವೈಟಿಪಿಎಸ್ ನಲ್ಲಿ ಒಟ್ಟು 1500 ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಕಾರ್ಮಿಕರಿಗಾಗಿ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಬೇಕು. ಕೆಪಿಸಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ದೊರಕಿಸಬೇಕು. ಶಕ್ತಿನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೋವಿಡ್ ಕೇರ್ ಸೆಂಟರ್ ಆರಂಭಿಸಬೇಕು ಎಂದು ಕಾರ್ಮಿಕರು ಪಟ್ಟುಹಿಡಿದಿದ್ದಾರೆ.
ವಿದ್ಯುತ್ ಬೇಡಿಕೆ ಕುಸಿತವಾಗಿರುವುದರಿಂದ ಆರ್.ಟಿ.ಪಿಎಸ್ ನ ಎಂಟು ಘಟಕಗಳಲ್ಲಿ ಒಂದು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ. ವೈಟಿಪಿಎಸ್‍ನ ಎರಡು ಘಟಕಗಳಲ್ಲಿ ಒಂದು ಘಟಕ ಮಾತ್ರ ಕೆಲಸ ಮಾಡುತ್ತಿದೆ. ಹೀಗಿದ್ದರೂ ಗರ್ಭಿಣಿಯರು, ವಯಸ್ಸಾದವರು, ಅಂಗವಿಕಲರಿಗೆ ಬಯೋಮೆಟ್ರಿಕ್ ನಿಂದ ವಿನಾಯಿತಿ ನೀಡಿಲ್ಲ. ಎಷ್ಟೇ ಬಾರಿ ಪತ್ರ ವ್ಯವಹಾರ ಮಾಡಿದರೂ ಸರ್ಕಾರ, ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಕಾರ್ಮಿಕ ಮುಖಂಡರು ಆರೋಪಿಸಿದ್ದಾರೆ.