ಭೋಪಾಲ್: ಕೊರೊನಾ ಬರುತ್ತದೆ ಎಂದು ಹೆದರಿ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ ನವವಿವಾಹಿತನೊಬ್ಬ ಪುರುಷತ್ವ ಪರೀಕ್ಷೆಗೆ ಒಳಗಾದ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ.
ದಂಪತಿ ಜೂನ್ 29 ರಂದು ಕೊರೊನಾ ನಿಯಮಗಳ ಪಾಲನೆಯೊಂದಿಗೆ ಮದುವೆಯಾಗಿದ್ದರು. ಮದುವೆಯಾದ ನಂತರ ಪತ್ನಿಯ ಮನೆಯವರಿಗೆ ಕೊರೊನಾ ಬಂದಿದೆ.
ಈ ವಿಚಾರ ತಿಳಿದು ಪತ್ನಿಗೂ ಕೊರೊನಾ ಬಂದಿರಬಹುದು. ಆದರೆ ಲಕ್ಷಣ ಕಾಣಿಸುತ್ತಿಲ್ಲ ಎಂದು ಪತಿ ಭಾವಿಸಿದ್ದ. ಅಷ್ಟೇ ಅಲ್ಲದೇ ಕೊರೊನಾ ವಿಷಯವನ್ನು ಪ್ರಸ್ತಾಪಿಸಿ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ. ಇದನ್ನೂ ಓದಿ: ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು
ಪತಿಯ ಈ ವಿಲಕ್ಷಣ ನಡೆಯಿಂದ ನವವಿವಾಹಿತೆ ಅನುಮಾನಗೊಂಡು, ಪುರುಷತ್ವ ಇಲ್ಲದ್ದಕ್ಕೆ ಈತ ಈ ರೀತಿ ನಡೆದುಕೊಳ್ಳುತ್ತಿದ್ದಾನೆ ಎಂದು ಭಾವಿಸಿ ಗಲಾಟೆ ಮಾಡಿ ತವರು ಮನೆಗೆ ತೆರಳಿದ್ದಾಳೆ.
ಮಗಳು ದಿಢೀರ್ ಬಂದ ವಿಚಾರ ತಿಳಿದು ಪೋಷಕರು ವಿಚಾರಿಸಿದ್ದಾರೆ. ವಿಷಯ ತಿಳಿದು ಎರಡು ಕುಟುಂಬದ ಸದಸ್ಯರು ಮಾತುಕತೆ ನಡೆಸಿ ಸಂಧಾನ ನಡೆಸಿದರೂ ಪತ್ನಿಯ ಅನುಮಾನ ಮಾತ್ರ ಪರಿಹಾರವಾಗಲೇ ಇಲ್ಲ.
ಪತಿಗೆ ಪುರುಷತ್ವ ಪರೀಕ್ಷೆ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದ ಪತ್ನಿ ಡಿ. 2 ರಂದು ವೈವಾಹಿಕ ವ್ಯಾಜ್ಯಗಳ ಕೇಂದ್ರಕ್ಕೆ ತೆರಳಿ ಮನವಿ ಸಲ್ಲಿಸಿದ್ದಾಳೆ. ಈ ಕೇಂದ್ರದ ಅಧಿಕಾರಿಗಳು ಪತಿಯನ್ನು ಕರೆಸಿ ದಾಂಪತ್ಯ ಜೀವನ ಮುಂದುವರಿಯಬೇಕಾದರೆ ಪುರುಷತ್ವ ಪರೀಕ್ಷೆಗೆ ಒಳಪಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. ಸಲಹೆಯನ್ನು ಒಪ್ಪಿದ ಪತಿ ಪುರುಷತ್ವ ಪರೀಕ್ಷೆ ಎದುರಿಸಿದ್ದು ಶುಕ್ರವಾರ ಪಾಸಿಟಿವ್ ಫಲಿತಾಂಶ ಬಂದಿದೆ.
ಪುರುಷತ್ವ ಸಾಬೀತಾದ ಬಳಿಕ ಪೋಕಷರು ಆಕೆಯ ಜೊತೆ ಮಾತನಾಡಿ ಗಂಡನ ಮನೆಗೆ ತೆರಳಬೇಕು ಎಂದು ಸಲಹೆ ನೀಡಿದ್ದಾರೆ. ಸಲಹೆಯನ್ನು ಒಪ್ಪಿದ ಪತ್ನಿ ಕೊನೆಗೂ ಪತಿ ಮನೆಗೆ ಹೋಗಲು ಒಪ್ಪಿಕೊಂಡಿದ್ದಾಳೆ.