ಲಕ್ನೋ: ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದ್ದು, ಕೊರೊನಾ ನೆಗೆಟಿವ್ ಇರುವ ತಾಯಿ, ಕೊರೊನಾ ಪಾಸಿಟಿವ್ ಇರುವ ಮಗುವಿಗೆ ಜನ್ಮ ನೀಡಿದ್ದಾಳೆ.
ಕೊರೊನಾ ಪಾಸಿಟಿವ್ ಇರುವ ತಾಯಂದಿರು ಆರೋಗ್ಯವಂತ ಮಗುವಿಗೆ ಜನ್ಮ ನೀಡುವುದಕ್ಕೆ ಕೇಳಿದ್ದೇವೆ. ಆದರೆ ಇಲ್ಲಿ ಉಲ್ಟಾ ಆಗಿದ್ದು, ತಾಯಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ. ಆದರೆ ಜನಿಸಿದ ಮಗುವಿಗೆ ಮಾತ್ರ ಪಾಸಿಟಿವ್ ಆಗಿದೆ. ಮೇ 25ರಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಎಸ್‍ಎಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.
Advertisement
Advertisement
ನನ್ನ ಪತ್ನಿ ಸುಪ್ರಿಯಾ ಮೇ 24ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಆಸ್ಪತ್ರೆಯಲ್ಲಿ ಆರ್‍ಟಿ-ಪಿಸಿಆರ್ ಕೊರೊನಾ ಪರೀಕ್ಷೆ ಮಾಡಿಸಲಾಗಿದೆ. ವರದಿಯಲ್ಲಿ ನೆಗೆಟಿವ್ ಬಂದಿದೆ. ಮರುದಿನ ಸುಪ್ರಿಯಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಮಗುವಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಮೇ 26ರಂದು ಪಾಸಿಟಿವ್ ಬಂದಿದೆ ಎಂದು 32 ವರ್ಷದ ಉದ್ಯಮಿ ಅನಿಲ್ ಪ್ರಜಾಪತಿ ಹೇಳಿದರು.
Advertisement
ಮಗುವನ್ನು ನಮ್ಮ ಕೈಗೆ ನೀಡುವ ಮೊದಲೇ ಆಪರೇಷನ್ ಥಿಯೇಟರ್‍ನಲ್ಲಿಯೇ ಮಗುವಿನ ಗಂಟಲು ಮಾದರಿಯನ್ನು ತೆಗೆದುಕೊಳ್ಳಲಾಗಿತ್ತು. ವಿಚಿತ್ರ ಎನ್ನಿಸುತ್ತಿದೆ, ಸ್ವಲ್ಪ ಆತಂಕ ಸಹ ಆಯಿತು. ಪರೀಕ್ಷಾ ವರದಿಯಲ್ಲಿಯೇ ದೋಷವಿದೆಯೇ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಆದರೆ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದರು.
Advertisement
ಘಟನೆಗೆ ಸಂಬಂಧಿಸಿದಂತೆ ಬಿಎಚ್‍ಯು ಮೆಡಿಕಲ್ ಸುಪರಿಂಟೆಂಡೆಂಟ್ ತನಿಖೆಗೆ ಆದೇಶಿಸಿದ್ದಾರೆ. ಕೆಲವೇ ದಿನಗಳಲ್ಲಿ ಮತ್ತೆ ಇಬ್ಬರಿಗೂ ಹೊಸದಾಗಿ ಪರೀಕ್ಷೆ ಮಾಡಿಸಲಾಗುವುದು ಎಂದು ಅವರು ತಿಳಿಸಿದರು.