ಬೆಂಗಳೂರು: ಕೊರೊನಾದ ಮಧ್ಯೆ ಜನರು ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಹಬ್ಬದ ಸಂಭ್ರಮದಲ್ಲಿ ಜನರು ಕೊರೊನಾ ಆತಂಕವನ್ನ ಮರೆತಿದ್ದಾರೆ ಎನ್ನುವಂತಿದೆ. ಬೆಳ್ಳಂಬೆಳ್ಳಗ್ಗೆ ಜನರು ಮಾರ್ಕೆಟ್‍ನಲ್ಲಿ ಹಬ್ಬದ ವಸ್ತುಗಳನ್ನ ಖರೀದಿ ಮಾಡಲು ಗುಂಪು ಗೂಡಿದ್ದಾರೆ.
ಇವತ್ತು ಗೌರಿ ಹಬ್ಬ, ನಾಳೆ ಗಣೇಶ ಚತುರ್ಥಿ. ಆದರೆ ಈ ಬಾರಿ ಗೌರಿ ಗಣೇಶ ಹಬ್ಬಕ್ಕೆ ಕೊರೊನಾ ಕವಿದಿದೆ. ಸಾಮಾಜಿಕ ಅಂತರವನ್ನು ಮರೆತು, ಮಾಸ್ಕ್ ಹಾಕಿಕೊಳ್ಳದೆ ಅಗತ್ಯ ವಸ್ತುಗಳನ್ನ ಖರೀದಿ ಮಾಡುವುದರಲ್ಲಿ ಜನರು ಬ್ಯುಸಿಯಾಗಿದ್ದಾರೆ. ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ ಜನ ಕೊರೊನಾ ಆತಂಕವನ್ನು ಮರೆತು ಅಜಾಗೃತರಾಗಿ ವ್ಯಾಪಾರ ಮಾಡುತ್ತಿದ್ದಾರೆ.
ಹಬ್ಬಕ್ಕೆ ಹೂ, ಹಣ್ಣು, ಬಾಳೆ ಕಂದಿನ, ಮಾರಾಟ ಬೆಂಗಳೂರಿನಲ್ಲಿ ಜೋರಾಗಿ ಆಗುತ್ತಿದೆ. ಕೊರೊನಾದ ನಡುವೆ ಗಣೇಶ ಹಬ್ಬವನ್ನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಬಂದ್ ಆಗಿದೆ. ಹೀಗಾಗಿ ಹೂವಿನ ವ್ಯಾಪಾರಿಗಳು ತಾತ್ಕಾಲಿಕವಾಗಿ ಕೆ.ಆರ್ ರೋಡ್‍ನಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡಿದ್ದಾರೆ.
ಇತ್ತ ಯಶವಂತಪುರ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಭರ್ಜರಿಯಾಗಿ ವ್ಯಾಪಾರ ಮಾಡುತ್ತಿದ್ದಾರೆ. ಹೌಸಿಂಗ್ ಬೋಡಿನಲ್ಲಿ ಸಂತೆ ಮಾರುಕಟ್ಟೆಗೆ ಹಬ್ಬದ ಅಗತ್ಯ ವಸ್ತುಗಳ ಖರೀದಿ ಮಾಡಲು ಅಪಾರ ಜನರು ಬಂದಿದ್ದಾರೆ. ಸಾಮಾಜಿಕ ಅಂತರ ಇಲ್ಲದೆ ಮಾಸ್ಕ್ ಧರಿಸದೆ ಜನರು ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.