ರಾಯಚೂರು: ಕೊರೊನಾ ನಿಯಂತ್ರಣಕ್ಕೆ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಿಂದ ಎಸ್‍ಎಂಎಸ್ ಸೂತ್ರ ಪ್ರಕಟಿಸಲಾಗಿದೆ.
ಎಸ್‍ಎಂಎಸ್‍ನಿಂದ ಕೊರೊನಾ ನಿಯಂತ್ರಣ ಸಾಧ್ಯ ಅಂತ ಭಕ್ತರಿಗೆ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ಆಶೀರ್ವಚನ ನೀಡಿದ್ದಾರೆ. ಎಸ್‍ಎಂಎಸ್ ಅಂದ್ರೆ ಮೊಬೈಲ್ ಸಂದೇಶ ಅಲ್ಲ, ಬದಲಿಗೆ ಸ್ಯಾನಿಟೈಸೇಷನ್, ಮಾಸ್ಕ್ ಹಾಗೂ ಸೋಷಿಯಲ್ ಡಿಸ್ಟೆನ್ಸ್ ಅಂತ ಕೊರೊನಾ ನಿಯಂತ್ರಣ ಸೂತ್ರವನ್ನು ಶ್ರೀಗಳು ಹೇಳಿದ್ದಾರೆ.
ಆರೋಗ್ಯ ಎಂಬುದು ಬಡವ ಶ್ರೀಮಂತ ಎನ್ನದೆ, ಜಾತಿ ಬೇಧವಿಲ್ಲದೆ, ಹೆಣ್ಣುಗಂಡು ಎಂಬ ಬೇಧವಿಲ್ಲದೆ ಎಲ್ಲರಿಗೂ ಚೆನ್ನಾಗಿ ಇರಬೇಕಾಗುತ್ತೆ. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಭಾರತ ಹಾಗೂ ಆರ್ಥಿಕವಾಗಿ ದೊಡ್ಡ ದೊಡ್ಡ ದೇಶಗಳಿಂದ ಹಿಡಿದು ಸಣ್ಣಪುಟ್ಟ ದೇಶಗಳ ಸರ್ಕಾರಗಳು ತಲ್ಲಣಗೊಂಡಿವೆ. ಹಾಗಾಗಿ ನಮ್ಮನ್ನು ನಾವು ಕಾಪಾಡಿಕೊಳ್ಳಲು ಎಸ್‍ಎಂಎಸ್ ಸೂತ್ರ ಸ್ವತಃ ಸಾರ್ವಜನಿಕರು ಹಾಗೂ ಭಕ್ತರು ಅನುಸರಿಸುಂತೆ ಮಂತ್ರಾಲಯ ಮಠದ ಶ್ರೀಗಳು ಶ್ರೀ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.
ಮಾಸ್ಕ್ ಧರಿಸುವುದು ನಾಚಿಕೆಗೇಡಿನ ಸಂಗತಿಯಲ್ಲ. ಬದಲಿಗೆ ನಿಮ್ಮಿಷ್ಟದ, ಉತ್ತಮ ಗುಣಮಟ್ಟದ ಹಾಗೂ ನಿಮಗೆ ಇಷ್ಟವಾಗುವ ಬಣ್ಣದ ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಯಾರೂ ಹೊರತಲ್ಲ ನಾನು ಮಾಸ್ಕ್ ಧರಿಸುತ್ತಿದ್ದೇನೆ ನೋಡಿ ಅಂತ ಮಾಸ್ಕ್ ಹಾಕಿಕೊಳ್ಳುತ್ತಲೇ ಭಕ್ತರಲ್ಲಿ ಎಸ್‍ಎಂಎಸ್ ಜಾಗೃತಿ ಮೂಡಿಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಯರ ದರ್ಶನಕ್ಕೆ ಭಕ್ತರಿಗೆ ಇನ್ನೂ ಅವಕಾಶ ಮಾಡಿಕೊಟ್ಟಿಲ್ಲ.