– 10ನೇ ತರಗತಿ ವಿದ್ಯಾರ್ಥಿನಿಗೂ ಪಾಸಿಟಿವ್
– ಇಡೀ ಶಾಲೆಗೆ ಕೊರೋನಾ ಟೆಸ್ಟ್
ಚಿಕ್ಕಮಗಳೂರು: ಮಹಾಮಾರಿ ಕೊರೊನಾ ಎರಡನೇ ಅಲೆಗೆ ಜಿಲ್ಲೆಯಲ್ಲಿ ಒಂದು ದಿನದ ಅಂತರದಲ್ಲಿ ಪತಿ-ಪತ್ನಿ ಸಾವನ್ನಪ್ಪಿದ್ದಾರೆ.
ಮಾರ್ಚ್ 30ರ ಮಂಗಳವಾರದಂದು ಚಿಕ್ಕಮಗಳೂರು ನಗರದ ನೆಹರೂ ನಗರ ನಿವಾಸಿ 69 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದರು. ಬುಧವಾರ 69 ವರ್ಷದ ವೃದ್ಧನ 58 ವರ್ಷದ ಪತ್ನಿ ಕೂಡ ಕೊರೊನಾಗೆ ಸಾವನ್ನಪ್ಪಿದ್ದಾರೆ.
Advertisement
Advertisement
ಮೃತ ಇಬ್ಬರು ಕೂಡ ಕ್ಯಾನ್ಸರ್ ಸೇರಿದಂತೆ ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದರು. ದಿನಂಪ್ರತಿ 10-15 ಪಾಸಿಟಿವ್ ಪ್ರಕರಣಗಳು ಬರುತ್ತಿದ್ದ ಜಿಲ್ಲೆಯಲ್ಲಿ ಮೊನ್ನೆ ಒಂದೇ ದಿನ 40 ಕೇಸ್ ದಾಖಲಾಗಿದ್ದು, ಜಿಲ್ಲೆಯ ಜನರ ಆತಂಕಕ್ಕೂ ಕಾರಣವಾಗಿದೆ. ಹಾಗಾಗಿ ಜಿಲ್ಲಾಡಳಿತ ಕೂಡ ಅಲರ್ಟ್ ಆಗಿದ್ದು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ರಿಪೋರ್ಟ್ ಇಲ್ಲದ್ದರೆ ವಾಪಸ್ ಕಳಿಸುತ್ತಿದ್ದಾರೆ. ಕೆಲವೆಡೆ ಸ್ಥಳದಲ್ಲೇ ಪರೀಕ್ಷೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಂದೇ ದಿನದ ಅಂತರದಲ್ಲಿ ಎರಡು ಸಾವು ಸಂಭವಿಸಿರುವುದರಿಂದ ಜನಸಾಮಾನ್ಯರೂ ಕೂಡ ಆತಂಕಕ್ಕೀಡಾಗಿದ್ದಾರೆ.
Advertisement
ಈ ಮಧ್ಯೆ ನಗರದ ಹೃದಯ ಭಾಗದಲ್ಲಿರೋ ಬಸವನಹಳ್ಳಿ ಬಾಲಕಿಯರ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಗೂ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಇಡೀ ಶಾಲೆಗೆ ಸ್ಯಾನಿಟೈಸ್ ಮಾಡಲಾಗಿದೆ. ಇದೇ ಶಾಲೆಯ ಆವರಣದಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕೂಡ ಇದ್ದು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರಿಗೂ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ಶಾಲಾ-ಕಾಲೇಜು ಸೇರಿ 500 ಕ್ಕೂ ಅಧಿಕ ವಿದ್ಯಾರ್ಥಿನಿಯರಿದ್ದು ಇಂದು 400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದೆ.
Advertisement
ಬುಧವಾರ ಶಾಲಾ-ಕಾಲೇಜಿಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಗುರುವಾರ ಕೊರೊನಾ ಪರೀಕ್ಷೆ ನಡೆಯಲಿದೆ. ಪ್ರೌಢ ಶಾಲೆ ಹಾಗೂ ಕಾಲೇಜು ಸೇರಿ 25 ಕ್ಕೂ ಹೆಚ್ಚು ಶಿಕ್ಷಕರಿಗೂ ಕೊರೊನಾ ಟೆಸ್ಟ್ ಮಾಡಲಾಗಿದೆ. ಪಾಸಿಟಿವ್ ಬಂದಿರೋ ವಿದ್ಯಾರ್ಥಿನಿ ಕಳೆದ ಎರಡು ದಿನಗಳಿಂದ ಶಾಲೆಗೆ ಬಂದಿಲ್ಲ. ಆದರೂ ಉಳಿದ ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿಯಲ್ಲಿ ಆತಂಕ ಮನೆಮಾಡಿದೆ.