ಚಿಕ್ಕಮಗಳೂರು: ಪ್ರತಿ ದಿನ ಹಾಸನದ ಸಂತೆಗೆ ಹೋಗಿ ಬರುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆ ಆತಂಕ ಗೊಂಡಿರುವ ತಾಲೂಕಿನ ಭೌದಣಿಕೆ ಗ್ರಾಮಸ್ಥರು ಇಡೀ ಗ್ರಾಮಕ್ಕೆ ಔಷಧಿ ಸಿಂಪಡಿಸಿದ್ದಾರೆ.
ಜೂನ್ 21ರ ಭಾನುವಾರದಂದು ಭೌದಣಿಕೆ ಗ್ರಾಮದ ತರಕಾರಿ ವ್ಯಾಪಾರಸ್ಥನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಗ್ರಾಮದ ವ್ಯಕ್ತಿಗೆ ಕೊರೊನಾ ಸೋಂಕು ತಗುಲುತ್ತಿದ್ದಂತೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿ ವರ್ಗ ಗ್ರಾಮಕ್ಕೆ ಭೇಟಿ ನೀಡಿತ್ತು. ಇಂದು ಗ್ರಾಮದಲ್ಲಿರೋ ನೂರಕ್ಕೂ ಹೆಚ್ಚು ಮನೆಗಳಿಗೆ ಔಷಧಿ ಸಿಂಪಡಿಸಲಾಗಿದೆ. ಪ್ರತಿ ಮನೆಯ ಸುತ್ತಮುತ್ತ, ರಸ್ತೆ, ಜನಸಾಮಾನ್ಯರು ಕೂರುತ್ತಿದ್ದ ಕಟ್ಟೆಗಳಿಗೂ ಸೇರಿದಂತೆ ಇಡೀ ಗ್ರಾಮಕ್ಕೆ ಔಷಧಿ ಸಿಂಪಡಿಸಲಾಗಿದೆ.
ಮುಂಜಾಗೃತ ಕ್ರಮವಾಗಿ ಸೋಂಕಿತ ವ್ಯಕ್ತಿಯ ಕುಟುಂಬಸ್ಥರು ಹಾಗೂ ಆತನ ಸಂಬಂಧಿಕರನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಯು ವಾಸವಿದ್ದ ಬೀದಿಯನ್ನು ಈಗಾಗಲೇ ಅಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ಸೀಲ್‍ಡೌನ್ ಮಾಡಿದ್ದಾರೆ. ಹಾಸನದ ಎಪಿಎಂಸಿಯಿಂದ ಪ್ರತಿದಿನ ತರಕಾರಿ ತಂದು ಮಾರುತ್ತಿದ್ದ ಈ ವ್ಯಕ್ತಿ ಚಿಕ್ಕಮಗಳೂರಿನ ಹಲವು ಏರಿಯಾಗಳಲ್ಲೂ ತರಕಾರಿ ವ್ಯಾಪಾರ ಮಾಡಿದ್ದ. ಈ ಮಧ್ಯೆ ತರಕಾರಿ ಖರೀದಿಗೆ ಬೇಲೂರು ಎಪಿಎಂಸಿ ಮಾರುಕಟ್ಟೆಗೂ ಹೋಗಿದ್ದ ಎಂದು ಹೇಳಲಾಗುತ್ತಿದೆ. ಈಗಾಗಲೇ ಚಿಕ್ಕಮಗಳೂರು ನಗರದ ಜಯನಗರ, ಕೋಟೆ ಬಡಾವಣೆ, ಮಾರ್ಕೇಟ್ ರಸ್ತೆ ಸೇರಿದಂತೆ ಚಿಕ್ಕಮಗಳೂರು ನಗರದ ಹಲವು ಏರಿಯಾಗಳಲ್ಲಿ ತೀವ್ರ ಆತಂಕ ಎದುರಾಗಿದ್ದು, ಜನ ಆತಂಕದಿಂದಲೇ ಜೀವನ ನಡೆಸುತ್ತಿದ್ದಾರೆ.