ಕೊರೊನಾಗೆ ದೆಹಲಿ ಏಮ್ಸ್‌ನ ಹಿರಿಯ ವೈದ್ಯ ಬಲಿ – ಪತ್ನಿಗೂ ಸೋಂಕು

Public TV
1 Min Read
AIIMS Hospital Senior Doctor

ನವದೆಹಲಿ: ಕೊರೊನಾ ದೇಶದಲ್ಲಿ ರುದ್ರನರ್ತನ ಮಾಡುತ್ತಿದ್ದು, ದೆಹಲಿ ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಸೋಂಕು ತಗಲಿ ಸಾವನ್ನಪ್ಪಿದ್ದಾರೆ.

ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ನ ಹಿರಿಯ ವೈದ್ಯರರಾದ ಡಾ.ಜಿತೇಂದ್ರ ನಾಥ್ ಪಾಂಡೆ (78) ಶನಿವಾರ ಸಾವನ್ನಪ್ಪಿದ್ದಾರೆ. ಇವರು ಏಮ್ಸ್‌ನ ಶ್ವಾಸಕೋಶಶಾಸ್ತ್ರ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವಿಭಾಗ ಒಂದು ವಾರದಿಂದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿತ್ತು.

AIIMS 1

ಜಿತೇಂದ್ರ ನಾಥ್ ಪಾಂಡೆ ಮತ್ತು ಅವರ ಪತ್ನಿಗೂ ಕಳೆದ ಮಂಗಳವಾರ ಕೊರೊನಾದ ಕೆಲ ಲಕ್ಷಣಗಳು ಕಾಣಿಸಿಕೊಂಡಿದ್ದವು. ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ನಂತರ ಅವರನ್ನು ಮನೆಯಲ್ಲೇ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಇತ್ತೀಚೆಗೆ ಅವರು ರೋಗದಿಂದ ಗುಣಮುಖರಾಗುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದರು ಎಂದು ಏಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮಾಹಿತಿ ನೀಡಿದ್ದಾರೆ.

coronavirus 3

ಈ ವಿಚಾರವಾಗಿ ಮಾತನಾಡಿರುವ ಗುಲೇರಿಯಾ, ಕೊರೊನಾ ಸೋಂಕು ಪಾಂಡೆಯವರಿಗೆ ಪಾಸಿಟಿವ್ ಬಂದ ನಂತರ ನಾವು ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಲೇ ಇದ್ದೇವು. ಇತ್ತೀಚೆಗಷ್ಟೇ ಪಾಂಡೆಯವರೇ ಸೋಂಕಿನಿಂದ ನಾನು ಗುಣಮುಖನಾಗುತ್ತಿದ್ದೇನೆ. ಬಹುಬೇಗ ಆಸ್ಪತ್ರೆಗೆ ಬರುತ್ತೇನೆ ಎಂದು ಹೇಳಿದ್ದರು. ಆದರೆ ಶನಿವಾರ ರಾತ್ರಿ ಊಟ ಮಾಡಿ ಮಲಗಿದವರು ಅಲ್ಲೇ ಸಾವನ್ನಪ್ಪಿದ್ದಾರೆ. ಅವರು ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ.

ಪಾಂಡೆ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಏಮ್ಸ್‌ನ ಹಿರಿಯ ಮಹಿಳಾ ವೈದ್ಯೆ ಡಾ.ಸಂಗೀತಾ ರೆಡ್ಡಿ, ಈ ರೋಗವು ಅತ್ಯಂತ ಪ್ರಸಿದ್ಧ ವೈದ್ಯನನ್ನು ಬಲಿ ಪಡೆದುಕೊಂಡಿದೆ. ಒಬ್ಬ ಪ್ರಖ್ಯಾತ ಶ್ವಾಸಕೋಶಶಾಸ್ತ್ರ ತಜ್ಞ ವೈದ್ಯ ಕೊರೊನಾಗೆ ಬಲಿಯಾದರು ಎಂದು ಕೇಳಿ ತುಂಬ ದುಖಃವಾಗಿದೆ. ಅವರ ಕುಟುಂಬಕ್ಕೆ ಅವರ ಸಾವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಬರೆದುಕೊಂಡಿದ್ದಾರೆ.

corona 8 e1589285177997

ಶುಕ್ರವಾರ ಏಮ್ಸ್‌ನ ಆರ್.ಪಿ.ಸಿ ಮೆಸ್‍ನಲ್ಲಿ ಕೆಲಸ ಮಾಡುವ ನೌಕರನೋರ್ವ ಕೊರೊನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದ. ಇದಾದ ಒಂದೇ ದಿನದಲ್ಲಿ ಪಾಂಡೆಯವರು ಕೂಡ ಸಾವನ್ನಪ್ಪಿದ್ದಾರೆ. ಏಮ್ಸ್‌ನ ಕ್ಯಾಂಟೀನ್ ಅಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಏಮ್ಸ್ ನಿರ್ದೇಶಕರು ಶುಕ್ರವಾರ ಆರ್.ಡಿ.ಎಗೆ ಪತ್ರವನ್ನು ಕೂಡ ಬರೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *