-ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ ನದಿ
ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಕೊಯ್ನಾ ಜಲಾಶಯದಿಂದ ಅಪಾರ ಪ್ರಮಾಣದ ಬಿಡುಗಡೆ ಮಾಡಲಾಗುತ್ತಿದೆ. ನದಿ ತೀರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಲಾಶಯದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದ ಕೃಷ್ಣಾ ನದಿ ಅಚ್ವುಕಟ್ಟು ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿದೆ. ಮೂರು ದಿನಗಳಲ್ಲಿ 180 ಮಿಲಿ ಮೀಟರ್ ಗಿಂತಲೂ ಅಧಿಕ ಮಳೆಯಾಗಿದ್ದು, ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಶನಿವಾರ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಕೃಷ್ಣಾ ನದಿ ತೀರದ ಜನರಲ್ಲಿ ಪ್ರವಾಹ ಆತಂಕ ಮನೆ ಮಾಡಿದೆ.
ಅಧಿಕ ಮಳೆ ಹಿನ್ನೆಲೆಯಲ್ಲಿ ನೀರು ಪ್ರಮಾಣ ಬಿಡುಗಡೆಯನ್ನ ಕೊಯ್ನಾ ಜಲಾಶಯ ಹೆಚ್ಚಿಸಿದೆ. 8:30 ಕ್ಕೆ 25,604, 11 ಗಂಟೆಗೆ 35,000 ಮತ್ತು ಮಧ್ಯಾಹ್ನ 2 ಗಂಟೆಗೆ 40,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. 24 ಗಂಟೆಗಳಲ್ಲಿ ಜಲಾಶಯದಲ್ಲಿ 5 ಟಿಎಂಸಿ ನೀರು ಸಂಗ್ರಹವಾಗಿದೆ. ರಾಧಾ ನಗರಿ ಜಲಾಶಯದಿಂದಲೂ ಸಹ 12,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಇತ್ತ ಪಶ್ಚಿಮಘಟ್ಟದಲ್ಲಿ ಹೆಚ್ಚು ಮಳೆಯಾಗ್ತಿರೋ ಹಿನ್ನೆಲೆ ಮಲಪ್ರಭಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿ ಬಳಿಯಲ್ಲಿರುವ ನವಿಲು ತೀರ್ಥ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ರಾಮದುರ್ಗ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹದ ಅತಂಕ ಎದುರಾಗಿದೆ. ನದಿ ತೀರಕ್ಕೆ ಯಾರೂ ತೆರಳದಂತೆ ಡಂಗೂರ ಸಾರಿ ನದಿ ತೀರದ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುತ್ತಿದೆ. ಕಸ ಸಾಗಿಸುವ ವಾಹನಗಳಲ್ಲಿಯೂ ಸ್ಪೀಕರ್ ಮೂಲಕ ಪುರಸಭೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.