ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಮತ್ತು ತಂತಿಪಾಲ ನಡುವೆ ರಸ್ತೆಯ ಪಕ್ಕದಲ್ಲಿ ಭಾರೀ ಭೂಕುಸಿತವಾಗಿದೆ. ಇದರಿಂದಾಗಿ ಮುಕ್ಕೋಡ್ಲು ಮತ್ತು ತಂತಿಪಾಲ ನಡುವಿನ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್ ಕೂಡಲೇ ಜೆಸಿಬಿ ಯಂತ್ರ ತರಿಸಿ ಕುಸಿದಿದ್ದ ಮಣ್ಣನ್ನು ಸ್ವಲ್ಪ ಪ್ರಮಾಣದಲ್ಲಿ ತೆರವುಗೊಳಿಸಿಸಿದ್ದಾರೆ.
ಕಾರು, ಜೀಪ್ ಸೇರಿದಂತೆ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ ಹಟ್ಟಿಹೊಳೆ ತುಂಬಿ ಹರಿಯುತ್ತಿರುವ ಪರಿಣಾಮ ಮುಕ್ಕೋಡ್ಲು ಸೇತುವೆ ಮೇಲೆ ಪ್ರವಾಹದಂತೆ ನೀರು ಹರಿಯುತ್ತಿದೆ. ವಿಷಯ ತಿಳಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸ್ಥಳಕ್ಕೆ ಭೇಟಿ ಅಲ್ಲಿಯೂ ಪರಿಶೀಲನೆ ನಡೆಸಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.
ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡುವಂತೆ ಅಪ್ಪಚ್ಚು ರಂಜನ್ ಹಾರಂಗಿ ಜಲಾಶಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.