ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಹಲವು ಅನಾಹುತಗಳನ್ನು ಸೃಷ್ಟಿಸಿದೆ.
ಮಡಿಕೇರಿ ತಾಲೂಕಿನ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಸುಂಟಿಕೊಪ್ಪ ಸುತ್ತಮುತ್ತ ಮಳೆ ಸುರಿಯುತ್ತಿದ್ದು, ಹಳ್ಳಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಸೋಮವಾರಪೇಟೆ ತಾಲೂಕಿನಾದ್ಯಂತ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಹೀಗಾಗಿ ಮಡಿಕೇರಿ-ಹಾಸನ ರಾಜ್ಯ ಹೆದ್ದಾರಿಯ ಗುಡುಗಳಲೆ ಜಾತ್ರಾ ಮೈದಾನದ ಬಳಿ ಮರದ ಬೃಹತ್ ಕೊಂಬೆಯೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಕೋವಿಡ್ ಲಾಕ್‍ಡೌನ್ ಇರುವುದರಿಂದ ವಾಹನ ಸಂಚಾರ ಕಡಿಮೆ ಇದ್ದು, ಯಾವುದೇ ಅನಾಹುತ ನಡೆಯಲಿಲ್ಲ.
Advertisement
Advertisement
ಶನಿವಾರಸಂತೆಯ ಸೆಸ್ ಇಲಾಖೆಯ ಲೈನ್‍ಮನ್‍ಗಳಾದ ಗಿರೀಶ್, ಸಂದೀಪ್, ಅಭಿಷೇಕ್ ಹಾಗೂ ಸಿದ್ದು ಸ್ಥಳಕ್ಕೆ ಆಗಮಿಸಿ ಕೂಡಲೇ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬೀಟಿಕಟ್ಟೆ ಬಳಿ ಸಹ ಮರ ರಸ್ತೆಗೆ ಅಡ್ಡ ಬಿದ್ದಿದೆ. ಮರ ತೆರವುಗೊಳಿಸದಿದ್ದರಿಂದ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
Advertisement
Advertisement
ನಿರಂತರ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ 750 ಕ್ಯೂಸೆಕ್ಸ್ ಒಳ ಹರಿವು ಬರುತ್ತಿದೆ. ಕೃಷಿ ಚಟುವಟಿಕೆಗಳು ಸಹ ಗರಿಗೆದರಿದ್ದು, ಹೆಚ್ಚಿನ ರೈತರು ಕೃಷಿ ಭೂಮಿಯಲ್ಲಿ ಇರುವುದು ಕಂಡುಬರುತ್ತಿದೆ.