ತಿರುವನಂತಪುರಂ: ಕಳೆದ ನಾಲ್ಕು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಇಡುಕ್ಕಿ ಜಿಲ್ಲೆಯ ರಾಜಮಲೈನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರು ಸಾವನ್ನಪ್ಪಿದ್ದಾರೆ.
ಇಡುಕ್ಕಿಯಲ್ಲಿ ಐದು ಜನ ಸಾವನ್ನಪ್ಪಿದ ನಂತರ ಭಾರೀ ಮಳೆಯಿಂದ ಮುನ್ನಾರ್ ನಲ್ಲಿ ಸಂಭವಿಸಿದ ಗುಡ್ಡ ಕುಸಿತಕ್ಕೆ ಕನಿಷ್ಠ 70 ಜನರು ಮಣ್ಣಿನ ಕೆಳಗೆ ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಮೊಬೈಲ್ ವೈದ್ಯಕೀಯ ತಂಡ ಮತ್ತು 15 ಅಂಬುಲೆನ್ಸ್‌ಗಳನ್ನು ಕಳುಹಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಹೇಳಿದ್ದಾರೆ.
ಮುಂಬರುವ ಮೂರು ದಿನಗಳಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮಳೆಯಾಗುವ ಸಂಭವಿದೆ ಎಂದು ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮುಂಜಾಗೃತ ಕ್ರಮವಾಗಿ ಕೇರಳದ ವಯನಾಡು ಮತ್ತು ಇಡುಕ್ಕಿಗೆ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ ಈ ಜಿಲ್ಲೆಗಳಿಗೆ ಭಾರಿ ಮಳೆಯಾಗುತ್ತಿರುವುದರಿಂದ, ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸಿದ್ದಾರೆ ಮತ್ತು ಭೂಕುಸಿತವಾಗುವ ನಿರೀಕ್ಷೆಯಿರುವ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರ ಮಾಡಲಾಗಿದೆ. ಜೊತೆಗೆ ನದಿ ಪಾತ್ರದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದು ಸೂಚನೆ ನೀಡಲಾಗಿದೆ.
#Kerala Red alert for extremely heavy rainfall warning issued for Idukki, Malappuram and Wayanad till 11 August. pic.twitter.com/ZJybEcLLdI
— ANI (@ANI) August 7, 2020
ಈ ಕುರಿತು ಮಾತನಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್, ಇಡುಕ್ಕಿಯ ರಾಜಮಲೈನಲ್ಲಿ ಭೂಕುಸಿತ ಸಂತ್ರಸ್ತರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‍ಡಿಆರ್‍ಎಫ್) ನಿಯೋಜಿಸಲಾಗಿದೆ. ಅಗ್ನಿಶಾಮಕ, ಅರಣ್ಯ ಮತ್ತು ಕಂದಾಯ ಅಧಿಕಾರಿಗಳಿಗೆ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.