ಕೇರಳ ಆನೆ ಹತ್ಯೆ ಪ್ರಕರಣ: ಬಿಜೆಪಿ ಸಂಸದೆ ಮನೇಕಾ ಗಾಂಧಿ ವಿರುದ್ಧ ದೂರು ದಾಖಲು

Public TV
3 Min Read
Maneka Gandhi

ತಿರುವನಂತಪುರಂ: ಕೇರಳದ ರಾಜ್ಯದ ಪಾಲಕ್ಕಡ್ ಜಿಲ್ಲೆಯಲ್ಲಿ ನಡೆದಿದ್ದ ಆನೆ ಹತ್ಯೆ ಪ್ರರಕಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕಿ, ಸಂಸದೆ ಮನೇಕಾ ಗಾಂಧಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.

ಮಲಪ್ಪುರಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಜಿಲ್ಲೆ ಹಾಗೂ ಅಲ್ಲಿನ ನಿವಾಸಿಗಳಿಗೆ ಅಪಮಾನ ಮಾಡುವ ರೀತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ ಎಂದು ವಕೀಲ ಸುಭಾಷ್ ಚಂದ್ರನ್ ಆರೋಪಿಸಿದ್ದಾರೆ. ಮನೇಕಾ ಗಾಂಧಿ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಹಲವರ ಮೇಲೂ ದೂರು ದಾಖಲಿಸಲಾಗಿದೆ. ಸದ್ಯ ಮನೇಕಾ ಅವರ ವಿರುದ್ಧ ಐಪಿಸಿ ಸೆಕ್ಷನ್ 153 ಎ (ಕೋಮು ಸಂಘರ್ಷಕ್ಕೆ ಪ್ರೇರಣೆ), 120 ಬಿ (ಕ್ರಿಮಿನಲ್ ಪಿತೂರಿ) ಅಡಿ ದೂರು ದಾಖಲಿಸಲಾಗಿದೆ.

ಅನಾನಸ್ ಹಣ್ಣಿನಲ್ಲಿ ಪಟಾಕಿ ಇಟ್ಟು ಆನೆಯ ಸಾವಿಗೆ ಕಾರಣರಾಗಿದ್ದ ಆರೋಪಿಗಳ ವಿರುದ್ಧ ದೇಶದ್ಯಾಂತ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಕೆಲವರು ಧರ್ಮದ ರಂಗು ಬಳಿದು ಜಿಲ್ಲೆಯಲ್ಲಿ ಹೆಚ್ಚಿರುವ ಸಮುದಾಯವೊಂದರ ಜನರಿಂದಲೇ ಇಂತಹ ಕೃತ್ಯ ನಡೆದಿದೆ ಎಂಬರ್ಥ ನೀಡುವ ಪೋಸ್ಟ್ ಗಳನ್ನು ಮಾಡಿದ್ದರು. ಮನೇಕಾ ಗಾಂಧಿ ಅವರು ನಮ್ಮ ಜಿಲ್ಲೆಯ ಜನರ ಸುಳ್ಳು ಆರೋಪಗಳನ್ನು ಮಾಡಿ ಪ್ರಚಾರ ಮಾಡುತ್ತಿದ್ದಾರೆ. ಜಿಲ್ಲೆಯ ಜನರ ನಡುವಿನ ಶಾಂತಿಯ ವಾತಾವರಣವನ್ನು ಕದಡುವಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂಬುವುದು ದೂರುದಾರರ ಆರೋಪವಾಗಿದೆ.

ಮನೇಕಾ ಗಾಂಧಿ ಅವರು ಆನೆಯನ್ನು ಕೊಂದ ಘಟನೆ ಬಗ್ಗೆ ಆಕ್ರೋಶ ಹೊರ ಹಾಕಿ ಕೆಲ ಅಂಕಿ ಅಂಶಗಳ ವಿವರಗಳನ್ನು ನೀಡಿದ್ದರು. ಕೇರಳದಲ್ಲಿ ಮೂರು ದಿನಕ್ಕೊಂದು ಆನೆಯನ್ನು ಹತ್ಯೆ ಮಾಡಲಾಗುತ್ತಿದೆ. ಅದರಲ್ಲೂ ಮಲಪ್ಪುರಂ ಜಿಲ್ಲೆ ಅಪರಾಧಗಳ ಗೂಡಾಗಿದೆ. ಆನೆಗಳ ರಕ್ಷಣೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು.

ಇತ್ತ ಪ್ರಕರಣ ವಿಚಾರಣೆಯನ್ನು ನಡೆಸುತ್ತಿರುವ ಪೊಲೀಸರು ಜೂನ್ 5ರಂದು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಶೀಘ್ರವೇ ಉಳಿದ ಆರೋಪಿಗಳನ್ನು ಕೂಡ ಬಂಧನ ಮಾಡುವುದಾಗಿ ಕೇರಳ ಅರಣ್ಯ ಇಲಾಖೆ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಬಂಧನ ಮಾಡಿರುವ ವ್ಯಕ್ತಿ ಸ್ಥಳೀಯರಿಗೆ ಸ್ಫೋಟಕ ಪದಾರ್ಥಗಳನ್ನು ಮಾರಾಟ ಮಾಡುತ್ತಾನೆ ಎಂಬ ಮಾಹಿತಿ ಲಭಿಸಿದ್ದು, ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸ್ಥಳೀಯರು ಇಂತಹ ಪದಾರ್ಥಗಳನ್ನು ಬಳಕೆ ಮಾಡುತ್ತಾರೆ ಎಂಬ ಅಂಶ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಕೇರಳ ಸಿಎಂ ಕೂಡ ಪ್ರಕರಣದ ಸಂಪೂರ್ಣ ತನಿಖೆ ಮಾಡಲು ಆದೇಶ ನೀಡಿರುವ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *