ನ್ಯೂಯಾರ್ಕ್: ಹೆಮ್ಮಾರಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಿದ್ದಕ್ಕಾಗಿ ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಟೀಚರ್ ಅವರಿಗೆ ವಿಶ್ವಸಂಸ್ಥೆ ವಿಶೇಷ ಗೌರವ ಸಲ್ಲಿಸಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷರ ನೇತೃತ್ವ ವಹಿಸಿದ್ದ ಸಾರ್ವಜನಿಕ ಸೇವಾ ದಿನಾಚರಣೆಯಲ್ಲಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಪಾಲ್ಗೊಂಡಿದ್ದರು. ಜೂನ್ 23ರಂದು ವರ್ಚುವಲ್ ಕಾರ್ಯಕ್ರಮದಲ್ಲಿ ಕೋವಿಡ್ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತದಿಂದ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರಿಗೆ ಮಾತ್ರ ಆಹ್ವಾನ ಸಿಕ್ಕಿತ್ತು.

ಈ ವೇಳೆ ಮಾತನಾಡಿದ ಕೆ.ಕೆ.ಶೈಲಜಾ ಟೀಚರ್, 2018-19ರ ನಡುವೆ ನಿಪಾ ವೈರಸ್ ಮತ್ತು ಎರಡು ಪ್ರವಾಹಗಳು ಸಂಭವಿಸಿ ರಾಜ್ಯವನ್ನು ತಲ್ಲಣಗೊಳಿಸಿತ್ತು. ಈ ವೇಳೆ ಕೈಗೊಂಡ ತಂತ್ರಗಳು ಕೋವಿಡ್-19 ಅನ್ನು ಸಮಯೋಚಿತವಾಗಿ ನಿಭಾಯಿಸಲು ಸಹಾಯಕವಾಯಿತು ಎಂದು ತಿಳಿಸಿದರು.
“ವುಹಾನ್‍ನಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾದ ತಕ್ಷಣವೇ ಎಚ್ಚೆತ್ತ ಕೇರಳ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿ, ಸೂಚನೆಯನ್ನು ಅನುಸರಿಸಲು ಆರಂಭಿಸಿತು. ವಿದೇಶದಿಂದ ಪ್ರತಿಯೊಬ್ಬರನ್ನ ಕ್ವಾರಂಟೈನ್ ಮಾಡುವುದು ಸೇರಿದಂತೆ ವಿವಿಧ ನಿಯಮಗಳನ್ನು ಅನುಸರಿಸಿದ್ದರಿಂದ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿತು” ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಕೆ.ಕೆ.ಶೈಲಜಾ ಹಾಗೂ ಕೊರೊನಾ ನಿಯಂತ್ರಣಕ್ಕೆ ನಿರ್ಣಾಯಕ ಪಾತ್ರ ವಹಿಸಿರುವ ವಿವಿಧ ದೇಶಗಳ ಪ್ರತಿನಿಧಿಗಳಿಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿ, ಗೌರವ ಸಲ್ಲಿಸಿತು. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಸಾಮಾನ್ಯ ಸಭೆಯ ಅಧ್ಯಕ್ಷ ಟಿಜ್ಜನಿ ಮೊಹಮ್ಮದ್ ಬಂಡೆ, ಇಥಿಯೋಪಿಯಾದ ಅಧ್ಯಕ್ಷ ಸಾಹ್ಲೆ ವರ್ಕ್ ಸೂಡ್, ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಡೆನೊಮಮ್ ಗೆಬ್ರಿಯೇಶಿಯಸ್, ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಉಪ ಕಾರ್ಯದರ್ಶಿ ಲಿಯು ಶೆನ್ಮಿನ್, ಕೊರಿಯಾದ ಆಂತರಿಕ ಮತ್ತು ಭದ್ರತಾ ಸಚಿವ ಚಿನ್ ಯಂಗ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

