– ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ `ಪರೀಕ್ಷಾ ಅಭ್ಯಾಸ’
– ಕಾರ್ಯಕ್ರಮಕ್ಕೆ ಸುರೇಶ್ ಕುಮಾರ್ ಚಾಲನೆ
ಬೆಂಗಳೂರು: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಪ್ರಸ್ತುತ ಪಡಿಸಿದ `ದೀಕ್ಷಾ’-ಆಪ್‍ನನ್ನು (ದೀಕ್ಷಾ-ಆ್ಯಪ್) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬುಧವಾರ ಚಾಲನೆ ನೀಡಿದರು.
ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ರಾಜ್ಯದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ `ಪರೀಕ್ಷಾ ಅಭ್ಯಾಸ’ ಎಂಬ ವಿನೂತನ ಕಾರ್ಯಕ್ರಮವನ್ನು ಅಳವಡಿಸಿ ದೀಕ್ಷಾ ವೇದಿಕೆಯ ಮೂಲಕ ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್‍ರವರು, ಪಿಯುಸಿ ವಿದ್ಯಾರ್ಥಿಗಳಿಗೆ ಮುಂಬರಲಿರುವ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಆತ್ಮವಿಶ್ವಾಸದಿಂದ ಸಿದ್ಧರಾಗುವುದಕ್ಕೆ ಈ ಆ್ಯಪ್ ಸಹಕಾರಿಯಾಗಲಿದೆ ಎಂದರು.
Advertisement
Advertisement
ಅದೇ ರೀತಿಯಾಗಿ ಡಿ.ಎಸ್.ಇ.ಆರ್.ಟಿ.ಯು 10ನೇ ತರಗತಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿದ್ಧತೆ ಮಾಡುವುದಕ್ಕಾಗಿ “ಫೋಕಸ್” ಎಂಬ ಪುನರ್ಮನನ ಕಾರ್ಯಕ್ರಮವನ್ನು ದೀಕ್ಷಾದಲ್ಲಿ ಪ್ರಸ್ತುತಪಡಿಸಿದೆ. ಪ್ರತಿಯೊಂದು ವಿಷಯಕ್ಕೆ ಇ-ಪಠ್ಯಪುಸ್ತಕ, ಕನಿಷ್ಠ 2 ಮಾಡೆಲ್ ಪ್ರಶ್ನೆ ಪತ್ರಿಕೆಗಳು, ವಿವರಾಣಾತ್ಮಕ ವಿಡಿಯೋಗಳು, ಅಧ್ಯಾಯವಾರು ಅಭ್ಯಾಸ ಪ್ರಶ್ನೋತ್ತರಗಳು ಅದರಲ್ಲಿ ದೊರೆಯಲಿವೆ ಎಂದು ಹೇಳಿದರು.
Advertisement
ವಿದ್ಯಾರ್ಥಿಗಳಿಗೆ ಮಂಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವುದಕ್ಕೆ ಸಹಾಯ ಮಾಡಲು ಪಿಸಿಎಂಬಿ ವಿಷಯಕ್ಕೆ ಸುಮಾರು 9,000 ಬಹು ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯು) ಅಧ್ಯಾಯವಾರು ಒದಗಿಸಲಾಗಿದೆ. ದೇಶದಲ್ಲಿಯೇ ಇದೊಂದು ವಿನೂತನ ಪ್ರಯೋಗವಾಗಿದ್ದು, ನಮ್ಮ ಕರ್ನಾಟಕದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಇದನ್ನು ಪ್ರಪ್ರಥಮವಾಗಿ ಜಾರಿಗೊಳಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಎಲ್ಲ ಪಠ್ಯಾಂಶಗಳನ್ನು ‘ದೀಕ್ಷಾ-ಆ್ಯಪ್’ದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಸಚಿವರು ಕೋರಿದರು.
Advertisement
ಏನಿದು ದೀಕ್ಷಾ-ಆಪ್ ಪ್ರೋಗ್ರಾಂ: ದೀಕ್ಷಾ ಪೋರ್ಟಲ್ ಅನ್ನು www.diksha.gov.in ಇಲ್ಲಿ ನೋಡಬಹುದಾಗಿದೆ. ಆಂಡ್ರಾಯಿಡ್ ಫೋನ್ ಗಳಲ್ಲಿ ದೀಕ್ಷಾ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಈ ಲಿಂಕ್ ಒತ್ತಿ ದೀಕ್ಷಾ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದು. DIKSHA – Platform for School Education
ದೀಕ್ಷಾ ಆ್ಯಪ್ ಅಥವಾ ಪೋರ್ಟಲ್ ನಲ್ಲಿ ನಿಮಗೆ ಬೇಕಿರುವ ಬೋರ್ಡ್, ಮಾಧ್ಯಮ, ಭಾಷೆ ಮತ್ತು ತರಗತಿಗಳನ್ನು ಆಯ್ಕೆ ಮಾಡಿಕೊಂಡು, ವಿವಿಧ ಬಗೆಯ ಪಠ್ಯಾಂಶಗಳನ್ನು ಪಡೆದುಕೊಳ್ಳಬಹುದು.
ದೀಕ್ಷಾ-ಆಪ್ ಉದ್ದೇಶ: ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕಲಿಕಾ ಸಂಪನ್ಮೂಲಗಳನ್ನು ಒದಗಿಸಿ, ಅವರ ಕಲಿಕೆಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಪ್ರೋಗ್ರಾಂ ರೂಪಿಸಲಾಗಿದೆ. ಕೋವಿಡ್ ಪಿಡುಗಿನ ಈ ಕಷ್ಟಕರ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ನಿಯಮಿತವಾಗಿ ಹೋಗುವುದಕ್ಕೆ ಸಾಧ್ಯವಾಗಿಲ್ಲ. ಶಿಕ್ಷಣ ಇಲಾಖೆಯು ಚಂದನ ಟಿವಿಯ ಮೂಲಕ ಆನ್‍ಲೈನ್ ಪಾಠಗಳನ್ನು ನಡೆಸುತ್ತಿದೆ. ಆದಾಗ್ಯೂ ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲಾ ಪಾಠಗಳನ್ನು ವೀಕ್ಷಿಸುವುದು ಸಾಧ್ಯವಾಗಿರುವುದಿಲ್ಲ. ದೀಕ್ಷಾ ಪೋರ್ಟಲ್‍ನಲ್ಲಿ ಅಳವಡಿಸಲಾಗಿರುವ ಈ ಎಲ್ಲಾ ಇ-ಕಲಿಕಾ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ತಮಗೆ ಸಾಧ್ಯವಾದಾಗ ಮತ್ತು ಅಗತ್ಯವಿದ್ದಾಗ ನೋಡಿಕೊಳ್ಳಬಹುದು.
ಕಾರ್ಯಕ್ರಮದ ವ್ಯಾಪ್ತಿ: 1 ರಿಂದ 12ನೇ ತರಗತಿಗಳಿಗೆ ಎಲ್ಲ ಬಗೆಯ ಪಠ್ಯಾಂಶಗಳು ಅಂದರೆ ಇ-ಪಠ್ಯಪುಸ್ತಕಗಳು (ಇಟಿಬಿ), ವಿವರಣಾತ್ಮಕ ಪಠ್ಯಾಂಶಗಳು, ಕಲಿಕಾ ಸಂಪನ್ಮೂಲಗಳು, ಅಭ್ಯಾಸ ಪ್ರಶ್ನೆಗಳು, ಪ್ರಶ್ನೆ ಕೋಶ (ಕ್ವಶ್ಚನ್ ಬ್ಯಾಂಕ್) ಮತ್ತು ಶಿಕ್ಷಕರಿಗೆ ಪಾಠ ಯೋಜನೆ ಇನ್ನಿತರ ಸಂಪನ್ಮೂಲಗಳನ್ನು ದೀಕ್ಷಾ ಪೋರ್ಟಲ್ ನಲ್ಲಿ ಅಳವಡಿಸಲಾಗಿದೆ.
ಕ್ವಶ್ಚನ್ ಬ್ಯಾಂಕಿನಲ್ಲಿ ಅಧ್ಯಾಯವಾರು ಬಹು ಆಯ್ಕೆ ಪ್ರಶ್ನೆಗಳು (ಎಂಸಿಕ್ಯು), ಕಿರು ಉತ್ತರಗಳು (ವೆರಿ ಶಾರ್ಟ್ ಅನ್ಸರ್), ಸಂಕ್ಷೀಪ್ತ ಉತ್ತರಗಳು (ಶಾರ್ಟ್ ಅನ್ಸರ್), ದೀರ್ಘ ಉತ್ತರಗಳು (ಲಾಂಗ್ ಅನ್ಸರ್); ಹೀಗೆ ನಾಲ್ಕು ರೀತಿಯ ಪ್ರಶ್ನೆಗಳು ಸೇರಿವೆ.
ಫೋಕಸ್ ಪ್ರೋಗ್ರಾಂ: 10ನೇ ತರಗತಿಯ ವಿದ್ಯಾರ್ಥಿಗಳು ಮಂಡಳಿಯ ಪರೀಕ್ಷೆಗೆ ಸಿದ್ಧರಾಗುವುದಕ್ಕೆ ಸಹಾಯವಾಗಲೆಂದು ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಪ್ರತಿ ಅಧ್ಯಾಯಕ್ಕೆ ಸುಮಾರು 30 ಪ್ರಶ್ನೆಗಳನ್ನು ಸೇರಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಹಲವಾರು ಕ್ಲಿಷ್ಟಕರ ಪರಿಕಲ್ಪನೆಗಳನ್ನು ಪುನರ್ಮನನ ಮಾಡುತ್ತ, ಪರೀಕ್ಷೆಗೆ ಆತ್ಮವಿಶ್ವಾಸದಿಂದ ಸಿದ್ಧರಾಗುವುದಕ್ಕೆ ಸಾಧ್ಯಗೊಳಿಸುತ್ತದೆ.
ದ್ವಿತೀಯ ಪಿಯುಸಿಗೆ: ಪಿಸಿಎಂಬಿ ವಿಷಯಗಳಿಗೆ, ಪ್ರತಿ ಅಧ್ಯಾಯಕ್ಕೂ ಸಮಾರು 80-100 ಪ್ರಶ್ನೆಗಳನ್ನು ಅಪ್ಲೋಡ್ ಮಾಡಲಾಗಿದೆ. ಇದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೆಸಿಇಟಿ, ಸಿಓಎಂಇಡಿಕೆ, ಜೆಇಇ, ನೀಟ್, ಹೀಗೆ ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡುವುದಕ್ಕೆ ಸಹಾಯವಾಗುತ್ತದೆ.
ಇದು ವಿದ್ಯಾರ್ಥಿಗಳಿಗೆ ಹೇಗೆ ಉಪಯುಕ್ತ?
ಈ ಎಲ್ಲಾ ಪಠ್ಯಾಂಶಗಳು ದೀಕ್ಷಾ ಪೋರ್ಟಲ್ ಮತ್ತು ದೀಕ್ಷಾ ಆ್ಯಪ್ ನಲ್ಲಿ ಲಭ್ಯವಿರುತ್ತವೆ. ವಿದ್ಯಾರ್ಥಿಗಳು ತಮಗೆ ಅರ್ಥವಾಗದ ಪಾಠ ಅಥವಾ ಅಧ್ಯಾಯಗಳನ್ನು ರಿಪ್ಲೇ ಮಾಡಿ ನೋಡಲು ಸಾಧ್ಯವಿರುತ್ತವೆ. ಜೊತೆಗೆ ವಿಡಿಯೋ, ಪಿಡಿಎಫ್ ರೂಪದಲ್ಲಿರುವ ವಿವರಣಾತ್ಮಕ ಪಠ್ಯಾಂಶಗಳನ್ನು ಆ್ಯಪ್‍ನಲ್ಲಿ ಡೌನ್ಲೋಡ್ ಮಾಡಿಟ್ಟುಕೊಂಡರೆ, ಇಂಟರ್ನೆಟ್ ಇಲ್ಲದಿದ್ದಾಗಲೂ ನೋಡಿಕೊಂಡು, ಅಭ್ಯಾಸ ಮಾಡುವುದಕ್ಕೆ ಸಾಧ್ಯವಿದೆ. ಶಿಕ್ಷಣ ಇಲಾಖೆಯ ತಜ್ಞ ಶಿಕ್ಷಕರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳ ಅಗತ್ಯ, ಪರೀಕ್ಷೆಯ ಸ್ವರೂಪ ಇವುಗಳನ್ನು ಗಮನದಲ್ಲಿಟ್ಟುಕೊಂಡು ಈ ಪಠ್ಯಾಂಶಗಳನ್ನು ಸಿದ್ಧಪಡಿಸಿರುವುದರಿಂದ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಸಿದ್ಧರಾಗಲು ಅತ್ಯಂತ ಉಪಯುಕ್ತವಾಗಿವೆ.
10ನೇ ತರಗತಿಯ ಸುಮಾರು 9 ಲಕ್ಷ ವಿದ್ಯಾರ್ಥಿಗಳು, 1ರಿಂದ – 10ನೇ ತರಗತಿ: ಸುಮಾರು 85 ಲಕ್ಷ ವಿದ್ಯಾರ್ಥಿಗಳು, ಪಿಯುಸಿ (ಪ್ರಥಮ & ದ್ವಿತೀಯ): ಸುಮಾರು 13 ಲಕ್ಷ ವಿದ್ಯಾರ್ಥಿಗಳು ದೀಕ್ಷಾ-ಆಪ್ ನ ಪ್ರಯೋಜನ ಪಡೆಯಲಿದ್ದಾರೆ. ಇಲಾಖೆಯು ಒದಗಿಸಿದ ಎಲ್ಲ ಪಠ್ಯಾಂಶಗಳನ್ನು `ದೀಕ್ಷಾ’ ವೇದಿಕೆಗೆ ಅಪ್ಲೋಡ್ ಮಾಡುವುದಕ್ಕೆ ಆರ್. ವಿ. ಎಂಜಿನಿಯರಿಂಗ್ ಕಾಲೇಜಿನ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹಾಯ ಮಾಡಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.