ಹಾಸನ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಕೂಡಾ ಹಾಸನ ಜಿಲ್ಲೆಯ ಕೆಲವು ಅಧಿಕಾರಿಗಳು ಒಂದು ಕುಟುಂಬದ ರಾಜಕಾರಣಿಗಳ ಕೆಳಗೆ ಜೀತ ಪದ್ದತಿಯಲ್ಲಿಯೇ ಇದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಆಕ್ರೋಶ ಹೊರಹಾಕಿದ್ದಾರೆ.
ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಜಿಲ್ಲಾಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ಕ್ಷೇತ್ರ ಮರು ವಿಂಗಡಣೆಯಾಗುತ್ತಿದ್ದು, ರಾಜಕೀಯದ ಕೆಲವು ನಾಯಕರುಗಳ ಒತ್ತಡಕ್ಕೆ ಮಣಿದು ಜಿಲ್ಲೆಯ ಕೆಲವು ಅಧಿಕಾರಿಗಳು ನಿಯಮ ಮೀರಿ ಕೆಲಸವನ್ನು ಮಾಡುತ್ತಿದ್ದಾರೆ. ಅಧಿಕಾರಿಗಳು ಒಂದು ಕುಟುಂಬಕ್ಕೆ ಇನ್ನು ಜೀತ ಪದ್ದತಿಯ ರೀತಿಯಲ್ಲಿ ಇದ್ದಾರೆ ಎಂದು ಭಾಸವಾಗುತ್ತಿದೆ ಎಂದು ದೇವೇಗೌಡರ ಕುಟುಂಬದ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು.
Advertisement
Advertisement
ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ ಪಡುವಲಹಿಪ್ಪೆಯನ್ನು ಜಿಲ್ಲಾ ಪಂಚಾಯ್ತಿ ಕ್ಷೇತ್ರವನ್ನಾಗಿ ಮಾಡುವ ಸಲುವಾಗಿ, ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಬರುವ ಕೆರಗೋಡು ಗ್ರಾಮ ಪಂಚಾಯ್ತಿಯನ್ನು ಪಡುವಲಹಿಪ್ಪೆ ಕ್ಷೇತ್ರಕ್ಕೆ ಸೇರಿಸಲು ಹೊರಟಿದ್ದಾರೆ. ಮರುವಿಂಗಡಣೆಯ ಸಮಯದಲ್ಲಿ ಆಯಾ ಕ್ಷೇತ್ರ ಸಮೀಪದ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದಿದ್ದಾರೆ.
Advertisement
Advertisement
ಸಮೀಪದಲ್ಲಿರುವ ಎರಡು ಗ್ರಾಮಪಂಚಾಯ್ತಿಯನ್ನು ಬಿಟ್ಟು ಅರಕಲಗೂಡು ತಾಲ್ಲೂಕಿನ ಕೆರಗೋಡುನ್ನು ಸೇರ್ಪಡೆ ಮಾಡಿಕೊಳ್ಳುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ಅಧಿಕಾರಿಗಳು ರಾಜಕೀಯದ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ ಎಂದರೆ ಅವರು ಜೀತ ಪದ್ದತಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.