– ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ
ರಾಯಚೂರು: ಆಗಸ್ಟ್ 17ರಂದು ಕೃಷ್ಣ ನದಿಯಲ್ಲಿ ತೆಪ್ಪ ಮುಳುಗಿ ನಾಪತ್ತೆಯಾಗಿದ್ದ ರಾಯಚೂರಿನ ನಡುಗಡ್ಡೆ ಗ್ರಾಮ ಕುರ್ವಕಲಾದ ನಾಲ್ಕು ಜನ ಕೊನೆಗೆ ಶವವಾಗಿ ಪತ್ತೆಯಾಗಿದ್ದಾರೆ.
ತೆಲಂಗಾಣದ ಪಂಚದೇವಪಾಡಗೆ ದಿನಸಿ ತರಲು ಹೋಗಿದ್ದವರು ಕುರ್ವಾಕುಲಕ್ಕೆ ಮರಳುವಾಗ ತೆಪ್ಪ ಮುಳುಗಿತ್ತು. ಮೊದಲಿಗೆ ಇಬ್ಬರು, ಬಳಿಕ ಒಬ್ಬರು ಒಟ್ಟು ಮೂರು ಜನ ತೆಲಂಗಾಣದ ಜುರಾಲಾ ಇಂದಿರಾ ಪ್ರಿಯದರ್ಶಿನಿ ಜಲಾಶಯದ ಬಳಿ ಶವವಾಗಿ ಪತ್ತೆಯಾಗಿದ್ದರು. ಇಂದು ಬಾಲಕಿ ರೋಜಾ ಸಹ ಜಲಾಶಯ ಬಳಿ ಶವವಾಗಿ ದೊರಕಿದ್ದಾಳೆ.
ಸುಮಲತಾ, ನರಸಮ್ಮ, ಪಾರ್ವತಿ ಹಾಗೂ ರೋಜಾ ಪತ್ತೆಗಾಗಿ ಎನ್.ಡಿ.ಆರ್.ಎಫ್, ಅಗ್ನಿ ಶಾಮಕ ದಳ ಸತತ ಕಾರ್ಯಾಚರಣೆ ನಡೆಸಿದ್ದರು ಸುಳಿವು ಪತ್ತೆಯಾಗಿರಲಿಲ್ಲ. ಎಲ್ಲ ನಾಲ್ಕು ಜನ ಕೊನೆಗೆ ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆವರೆಗೆ ಕೃಷ್ಣ ನದಿಯಲ್ಲಿ ನಾಪತ್ತೆಯಾಗಿದ್ದವರಲ್ಲಿ ಮೂವರ ಶವ ಪತ್ತೆ ಹಿನ್ನೆಲೆ ಮೂವರ ಕುಟುಂಬಕ್ಕೆ ಜಿಲ್ಲಾಡಳಿತ ತಲಾ 5 ಲಕ್ಷ ಪರಿಹಾರ ನೀಡಿದೆ. ಸುಮಲತಾ, ಪಾರ್ವತಿ, ನರಸಮ್ಮ ಕುಟುಂಬಕ್ಕೆ ಒಟ್ಟು 15 ಲಕ್ಷ ಪರಿಹಾರ ನೀಡಲಾಗಿದೆ.
ರಾಯಚೂರು ತಹಶೀಲ್ದಾರ್ ಖಾತೆಯಿಂದ ಸಂತ್ರಸ್ತ ಕುಟುಂಬಕ್ಕೆ ಆರ್.ಟಿ.ಜಿ.ಎಸ್ ಮೂಲಕ ಪರಿಹಾರ ನೀಡಲಾಗಿದೆ. ರಾಯಚೂರು ಜಿಲ್ಲಾಧಿಕಾರಿ ಮೌಖಿಕ ಆದೇಶ ಹಿನ್ನೆಲೆ ಪರಿಹಾರ ವಿತರಣೆ ಮಾಡಲಾಗಿದೆ. ಈಗ ಬಾಲಕಿ ರೋಜಾ ಸಹ ಶವವಾಗಿ ಪತ್ತೆಯಾಗಿದ್ದಾಳೆ.