ರಾಯಚೂರು: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಪ್ರವಾಹ ಭೀತಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ.
ನಾರಾಯಣಪುರದ ಬಸವಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದಿಂದ ಕೃಷ್ಣಾ ನದಿಗೆ 1 ಲಕ್ಷ 82 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹೀಗಾಗಿ ಯರಗೋಡಿ, ಹಂಚಿನಾಳ, ಕಡದರಗಡ್ಡಿ, ಯಳಗುಂದಿ, ಶೀಲಹಳ್ಳಿ ಮಾರ್ಗ ಕಡಿತವಾಗಿದೆ. ಅಲ್ಲದೇ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.
ಇನ್ನೂ ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆಗೆ ಕೆಲವೇ ಅಡಿ ಬಾಕಿಯಿದ್ದು, ಈಗಾಗಲೇ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ರಾಯಚೂರು-ಕಲಬುರಗಿ ನಡುವಿನ ಸಂಪರ್ಕ ಸೇತುವೆ ಮುಳುಗಡೆ ಭೀತಿಯಿಂದ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ.
ನದಿ ದಡದಲ್ಲಿನ ಗಡ್ಡಿಗೂಳಿ ಬಸವಣ್ಣ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ. 2.5 ಲಕ್ಷ ಕ್ಯೂಸೆಕ್ ನೀರಿಗೆ ಸೇತುವೆ ಮುಳುಗಡೆಯಾಗಲಿದೆ. ಸದ್ಯ 1 ಲಕ್ಷ 82 ಸಾವಿರ ಕ್ಯೂಸೆಕ್ ನೀರನ್ನು ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಬಿಡಲಾಗುತ್ತಿದ್ದು, ಇನ್ನೂ ಹೆಚ್ಚಳವಾಗುವ ಸಾಧ್ಯತೆಯಿದೆ. ಹೀಗಾಗಿ ಕೃಷ್ಣಾ ಜಲಾನಯನ ಪ್ರದೇಶದ ಗ್ರಾಮಗಳಲ್ಲಿ ಪ್ರವಾಹ ಆತಂಕ ಹೆಚ್ಚಾಗಿದೆ.