ಹಾಸನ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ. ನಮ್ಮಲ್ಲಿ ಕಚ್ಚಾಟವಿಲ್ಲ, ಆರಾಮಾಗಿದ್ದೇವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಅಧಿಕಾರ ಕೊಟ್ಟರೆ ಒಳ್ಳೆಯ ಕೆಲಸ ಮಾಡುತ್ತೇವೆ, ಇಲ್ಲ ಸುಮ್ಮನ್ನಿರುತ್ತೇವೆ. ಈ ಹಿಂದೆ ಅಧಿಕಾರ ಕೊಟ್ಟಿದ್ದರು 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇವೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ನಾನು ಮುಖ್ಯಮಂತ್ರಿ ಎಂದು ಒಬ್ಬರಿಗೊಬ್ಬರು ಹೊಡೆದಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ ಎಂದು ತಿಳಿಸಿದರು.
Advertisement
Advertisement
ಕೋವಿಡ್ ಹೆಸರಿನಲ್ಲಿ ಗ್ರಾ.ಪಂ. ಅನುದಾನವನ್ನು ಕಡಿತ ಮಾಡಿದ್ದಾರೆ, ಎಂಎಲ್‍ಎ ಅನುದಾನವನ್ನು ಕೊಟ್ಟಿಲ್ಲ. ಗ್ರಾಮ ಪಂಚಾಯಿತಿಯ ಹಕ್ಕನ್ನು ಕಸಿದುಕೊಳ್ಳಬೇಡಿ. ಸರ್ಕಾರ ಇದನ್ನು ಸರಿಪಡಿಸದಿದ್ದರೆ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಒಳಗೊಂಡಂತೆ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ, ನಂತರ ರಾಜ್ಯಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
Advertisement
ಸರ್ಕಾರಕ್ಕೆ ನಾಚಿಕೆಯಾಗಬೇಕು, ಇದನ್ನು ಸರ್ಕಾರ ಎನ್ನುತ್ತಾರಾ? ಸರ್ಕಾರ ಲೂಟಿಕೋರರ ಕೈಸೇರಿದೆ, ಕೊರೊನಾ ಹೆಸರಿನಲ್ಲಿ ರಾಜ್ಯದಲ್ಲಿ ಲೂಟಿ ನಡೆಯುತ್ತಿದೆ. ಮೋದಿಯವರೇ ಸರ್ಕಾರವನ್ನು ಲೂಟಿಕೋರರ ಕೈಗೆ ಕೊಟ್ಟಿದ್ದೀರಾ, ಕೇಂದ್ರ ಸರ್ಕಾರ ನೀಡುವ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ, ಅಚ್ಛೆ ದಿನ್ ಬರುತ್ತೆ ಎಂದು ಮೋದಿ ಹೇಳುತ್ತಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ವರದಿ ತರಿಸಿಕೊಳ್ಳಿ. ಇದು ದಪ್ಪ, ಎಮ್ಮೆ ಚರ್ಮದ ಸರ್ಕಾರ. ಸರ್ಕಾರಕ್ಕೂ ಕೊರೊನಾ ಇದೆಯೋ ಗೊತ್ತಿಲ್ಲ, ಅದನ್ನು ರಿಪೇರಿ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಜೆಡಿಎಸ್ ಸದಸ್ಯರಿಂದ ಬಿಜೆಪಿಗೆ ಬೆಂಬಲ
ಅರಸೀಕೆರೆ ನಗರಸಭೆಯ 7 ಜೆಡಿಎಸ್ ಸದಸ್ಯರು ಹಾಗೂ ಒಬ್ಬ ಪಕ್ಷೇತರ ಸದಸ್ಯ ಬಂಡಾಯ ಬಾವುಟ ಹಾರಿಸಿದ್ದಾರೆ. ತಮಗೆ ಪ್ರತ್ಯೇಕ ಆಸನ ನೀಡುವಂತೆ ಹಾಸನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. 31 ಸದಸ್ಯರನ್ನು ಒಳಗೊಂಡಿರುವ ಅರಸೀಕೆರೆ ನಗರಸಭೆಯಲ್ಲಿ 21 ಮಂದಿ ಜೆಡಿಎಸ್ ನಿಂದ ಗೆದ್ದುಬಂದಿದ್ದು, ಬಿಜೆಪಿಯಿಂದ 6 ಹಾಗೂ ಪಕ್ಷೇತರ 3 ಮತ್ತು ಕಾಂಗ್ರೆಸ್ ಒಬ್ಬರು ಆಯ್ಕೆಯಾಗಿದ್ದಾರೆ.
ಜೆಡಿಎಸ್ ಶಾಸಕ ಶಿವಲಿಂಗೇಗೌಡರ ವಿರುದ್ಧ ಮುನಿಸಿಕೊಡಿರುವ ಜೆಡಿಎಸ್‍ನ ಏಳು ಸದಸ್ಯರು, ತಮಗೆ ಯಾವುದೇ ರೀತಿ ಸ್ಪಂದನೆಯನ್ನು ಈಗಿರೋ ನಾಯಕರು ನೀಡುತ್ತಿಲ್ಲ. ಮೀಸಲಾತಿಯನ್ವಯ ಈಗ ಬಿಜೆಪಿಯವರು ಅರಸೀಕೆರೆ ನಗರಸಭೆ ಅಧ್ಯಕ್ಷರಾಗಿದ್ದಾರೆ. ಅವರು ಉತ್ತಮವಾಗಿ ಕೆಲಸ ಮಾಡಬೇಕಾದರೆ ನಮ್ಮೆಲ್ಲರ ಸಹಕಾರ ಬೇಕಾಗಿರುತ್ತದೆ. ಇದರಿಂದ ನಾವೂ ಉತ್ತಮವಾಗಿ ಜನಸೇವೆ ಮಾಡಬಹುದು ಎಂಬ ಕಾರಣ ನೀಡಿ, ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿ, ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವಂತೆ ಡಿಸಿಗೆ ಮನವಿ ಮಾಡಿದ್ದಾರೆ. ಜೊತೆಗೆ ಅರಸೀಕೆರೆ ನಗರಸಭೆಗೆ ಜೆಡಿಎಸ್‍ನಿಂದ 21 ಜನ ಆಯ್ಕೆಯಾಗಿದ್ದು, ಆ ಸಂಖ್ಯೆಯ ಮೂರನೇ ಒಂದು ಭಾಗವಾಗಿ ನಾವು ಏಳುಜನ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆಯನ್ನು ನೀಡಿದ್ದೇವೆ. ಹೀಗಾಗಿ ನಾವು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದಂತೆ ಆಗುವುದಿಲ್ಲ ಎನ್ನುತ್ತಿದ್ದಾರೆ.
ಶಿವಲಿಂಗೇಗೌಡ ಆಕ್ರೋಶ
ಈ ಬೆಳವಣಿಗೆಯಿಂದ ಕೆರಳಿದ ಶಾಸಕ ಶಿವಲಿಂಗೇಗೌಡ, ಈ ರಾಜಕೀಯ ಕುಚೇಷ್ಟೆ ಹಿಂದೆ ನೇರವಾಗಿ ಬಿಜೆಪಿ ಇದೆ ಎಂದು ಆರೋಪ ಮಾಡಿದ್ದಾರೆ. ಜೊತೆಗೆ ಅರಸೀಕೆರೆಗೆ ರಾಜಕೀಯ ಆಸರೆ ಪಡೆಯಲು ಬಂದವರೊಬ್ಬರು ಇದನ್ನೆಲ್ಲ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರವನ್ನೇ ಕೆಡವಿದವರಿಗೆ ಅರಸೀಕೆರೆ ನಗರಸಭೆ ಕೆಡವಲು ಆಗಲ್ವೇ ಎಂದು ಪರೋಕ್ಷವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ರಾಜಕೀಯ ದಾಳದ ಬಗ್ಗೆ ತಿರುಗಿಬಿದ್ದಿದ್ದಾರೆ. ಈ ವಿಚಾರವಾಗಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಈ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅರಸೀಕೆರೆಯಲ್ಲಿ ಜೆಡಿಎಸ್ ಸಂಖ್ಯಾ ಬಲ ಜಾಸ್ತಿ ಇದ್ದರೂ ಮೀಸಲಾತಿ ಆಧಾರದ ಮೇಲೆ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಅಲಂಕರಿಸಿದ್ದಾರೆ. ಆದರೆ ಜೆಡಿಎಸ್ ಭದ್ರ ಕೋಟೆಯಾಗಿರುವ ಅರಸೀಕೆರೆಯಲ್ಲಿ ಬಿಜೆಪಿ ಇಷ್ಟೆಲ್ಲಾ ಕಸರತ್ತು ಮಾಡುತ್ತಿದೆ ಎಂದರೆ ಅದರ ಹಿಂದೆ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಇದ್ದಾರೆ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಎನ್.ಆರ್.ಸಂತೋಷ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ, ಅರಸೀಕೆರೆಯಿಂದ ಸ್ಪರ್ಧೆಗೆ ಸಿದ್ಧ ಎಂದು ಈ ಹಿಂದೆ ಕೂಡ ಸ್ಪಷ್ಟವಾಗಿ ಹೇಳಿದ್ದರು. ಅಲ್ಲದೆ ನಿರಂತರವಾಗಿ ಅರಸೀಕೆರೆಯಲ್ಲಿ ಓಡಾಡುತ್ತಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್, ಈಗ ತೆರೆಮರೆಯಲ್ಲೇ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಜೆಡಿಎಸ್ ನಾಯಕರು ತಮ್ಮ ಸದಸ್ಯರನ್ನು ಹೇಗೆ ಮನವೊಲಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.