ದಾವಣಗೆರೆ: ಕಾಂಗ್ರೆಸ್-ಜೆಡಿಎಸ್ ಸೇರಿ ಕುಮಾರಸ್ವಾಮಿ ಲಾಟರಿ ಮುಖ್ಯಮಂತ್ರಿಯಾಗಿದ್ದರು ಎಂದು ಶಾಸಕ ಎಂಪಿ ರೇಣುಕಾಚಾರ್ಯ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಳಿ ನಡೆಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಅರೆಂಜ್ ಮ್ಯಾರೇಜ್ ಅಲ್ಲ ಅನೈತಿಕ ಸಂಬಂಧದಿಂದ ಸಿಎಂ ಆದವರು. ಕಾಂಗ್ರೆಸ್ ಶಾಸಕರು ಹೊರ ಹೋಗುವಂತೆ ಕಾಂಗ್ರೆಸ್ ನಾಯಕರೇ ಮಾಡಿದ್ದು. ಏಕೆಂದರೆ ಹಿಂದೆ ಕುಮಾರಸ್ವಾಮಿಯವರು ಇವರಿಗೆ ಮೋಸ ಮಾಡಿದ್ದರು. ಆದರೆ ಕುಮಾರಸ್ವಾಮಿಯವರಿಗೆ 2006ರಲ್ಲಿ ಬಿಜೆಪಿ ಅಸ್ತಿತ್ವ ಕೊಟ್ಟಿತ್ತು. ಆಗ ಕುಮಾರಸ್ವಾಮಿ ವಚನ ಭ್ರಷ್ಠರಾದರು, ವಚನ ಭ್ರಷ್ಠರಾದ ಮೇಲೆ ಕುಮಾರಸ್ವಾಮಿ ರಾಜಕೀಯ ಜೀವನ ಹೀನಾಯವಾಯಿತು ಎಂದರು.
ಕುಮಾರಸ್ವಾಮಿ 37 ಸ್ಥಾನ ಪಡೆದು ಲಾಟ್ರಿ ಮುಖ್ಯಮಂತ್ರಿ ಯಾದ್ರೂ, ಅವರ ಪಕ್ಷದ ಶಾಸಕರೇ ಬೇಸತ್ತು ಬಿಜೆಪಿ ಕಡೆ ಬಂದಾಗ ನಾವು ಸರ್ಕಾರ ರಚನೆ ಮಾಡಿದ್ದೇವೆ. ಕುಮಾರಸ್ವಾಮಿಯವರಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದೀಗ ಬಂದಿದ್ದು, ಕಾಂಗ್ರೆಸ್ ಸ್ಥಿತಿ ಮೋಹಿನಿ ಭಸ್ಮಾಸೂರನ ಕಥೆಯಾಗಿದೆ ಎಂದು ನಗೆ ಚಟಾಕಿ ಹಾರಿಸಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಕಲಿ ಹಿಂದುಗಳು, ನಾವು ಎದೆ ತಟ್ಟಿಕೊಂಡು ಹೇಳುತ್ತೇವೆ ನಾವು ಹಿಂದುತ್ವದ ಪ್ರತಿಪಾದಕರು. ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ನಿಷೇಧ ಮಸೂದೆಯನ್ನು ಮಂಡಿಸಿಯೇ ಮಂಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲ್ ಹಾಕಿದರು.