– ತನಗೆ ತಂದಿದ್ದ ಊಟ ನೀಡಿದ್ದ ಯುವಕ
ಮಂಡ್ಯ: ಕುಡಿಯೋಕೆ ಎಣ್ಣೆ, ತಿನ್ನೋಕೆ ಊಟ ಕೇಳಿ ಪಡೆದುಕೊಂಡ. ಕೊನೆಗೆ ಎಣ್ಣೆ ಮತ್ತು ಊಟ ಕೊಟ್ಟವನನ್ನೇ ಗುಂಪು ಕಟ್ಟಿಕೊಂಡು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ನಿವಾಸಿ ಪೂರ್ಣಚಂದ್ರ (28) ಎಂಬಾತನನ್ನು ಲಾಂಗು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜಕ್ಕನಹಳ್ಳಿ ಗ್ರಾಮದ ವಿನಯ್ ಹಾಗೂ ಆತನ 6 ಮಂದಿ ಸ್ನೇಹಿತರು ಸೇರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ಘಟನೆ ಶುಕ್ರವಾರ ರಾತ್ರಿ ಶ್ರೀರಂಗಪಟ್ಟಣದ ಶ್ರೀರಾಂಪುರ ಬಳಿಯ ಕ್ರಷರ್ ಬಳಿ ನಡೆದಿದ್ದು, ಈ ಘಟನೆಯಿಂದ ಶ್ರೀರಂಗಪಟ್ಟಣ ತಾಲೂಕಿನ ಜನರು ಬೆಚ್ಚಿ ಬಿದ್ದಿದ್ದಾರೆ. ಕಳೆದ ರಾತ್ರಿ ಕೊಲೆಯಾದ ಪೂರ್ಣಚಂದ್ರ ಹಾಗೂ ಆತನ ಸ್ನೇಹಿತರಾದ ಪವನ್, ಚಾಮರಾಜ ಜೊತೆ ಜಕ್ಕನಹಳ್ಳಿಯ ಅಂಗಡಿಯ ಬಳಿ ಗೇಮ್ ಆಡಿಕೊಂಡು ಕಾಲ ಕಳೆಯುತ್ತಿದ್ದನು. ನಂತರ ಕ್ರಷರ್ ಬಳಿ ಸ್ನೇಹಿತರೊಂದಿಗೆ ಹೋಗಿ ಸ್ವಲ್ಪ ಹೊತ್ತು ಟೈಮ್ ಪಾಸ್ ಮಾಡಿಕೊಂಡು ನಂತರ ಪೂರ್ಣಚಂದ್ರ ಊಟಕ್ಕೆ ಕುಳಿತಿದ್ದನು.
ಈ ವೇಳೆ ಸ್ಥಳಕ್ಕೆ ಬಂದ ಆರೋಪಿ ವಿನಯ್ ಎಣ್ಣೆ ಕೇಳಿದ್ದಾನೆ. ಆಗ ಪೂರ್ಣಚಂದ್ರ ಕ್ರಷರ್ ಸಿಬ್ಬಂದಿಗೆ ತಂದಿದ್ದ ಬಿಯರ್ ಕೊಟ್ಟಿದ್ದಾನೆ. ಇದಾದ ಬಳಿಕ ಆರೋಪಿ ವಿನಯ್ ಊಟ ಕೇಳಿದ್ದು, ಕೊನೆಗೆ ತನಗೆ ತಂದಿದ್ದ ಚಪಾತಿಯನ್ನು ನೀಡಿದ್ದಾನೆ. ನಂತರ ಚಪಾತಿ ತಿಂದು, ಎಣ್ಣೆ ಕುಡಿದು ಆರೋಪಿ ಹೋಗಿದ್ದಾನೆ. ಹತ್ತು ನಿಮಿಷದ ನಂತರ ವಿನಯ್ ಗುಂಪಿನಲ್ಲಿ ಬಂದು ಪೂರ್ಣಚಂದ್ರನ ಜೊತೆಗೆ ಇದ್ದವರನ್ನು ಎದುರಿಸಿ ಪೂರ್ಣಚಂದ್ರನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಕೊಲೆಗೆ ಇನ್ನೂ ನಿಖರ ತಿಳಿದು ಬಂದಿಲ್ಲ. ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.