– ಮುಗುಟಗೇರಿಯಲ್ಲಿ ಹೃದಯ ವಿದ್ರಾವಕ ಘಟನೆ
ಮಡಿಕೇರಿ: ವ್ಯಕ್ತಿಯೊಬ್ಬ ತನ್ನ ಕುಟುಂಬದ ಸದಸ್ಯರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆರು ಜನರನ್ನು ಬಲಿ ತೆಗೆದುಕೊಂಡ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿ ನಡೆದಿದೆ.
ಬೆಂಕಿ ಹಚ್ಚಿದ ದುಷ್ಕರ್ಮಿಯನ್ನು ಎರವರ ಮಂಜ ಎಂದು ಗುರುತಿಸಲಾಗಿದೆ. ಈತ ಕುಡಿದ ಮತ್ತಿನಲ್ಲಿ ಕುಟುಂಬ ಸದಸ್ಯರ ಮೇಲೆ ಬೆಂಕಿ ಹಚ್ಚಿ ತಲೆಮರೆಸಿಕೊಂಡಿದ್ದಾನೆ. ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿರುವ ವಸಂತ(ಚಿಟ್ಟಿಯ್ಯಪ್ಪ) ಎಂಬವರ ಲೈನ್ ಮನೆಯಲ್ಲಿ ಎರವರ ಮಂಜು ವಾಸವಿದ್ದರು. ಇವರ ಮನೆಗೆ ಕುಟುಂಬದ ಐದಾರು ಮಂದಿ ಸದಸ್ಯರು ಬಂದು ತಂಗಿದ್ದರು. ಬೆಳಗ್ಗಿನ ಜಾವ ಸುಮಾರು 2 ಗಂಟೆ ವೇಳೆಯಲ್ಲಿ ಮಂಜು ಅವರ ತಂದೆ ಎರವರ ಬೋಜ ಪಾನಮತ್ತನಾಗಿ ಮನೆಯ ಹೊರ ಬಂದು ಎಲ್ಲಾ ಬಾಗಿಲು, ಕಿಟಕಿಗಳನ್ನು ಮುಚ್ಚಿದ್ದಾನೆ. ಮನೆಯ ಮೇಲೇರಿ ಹಂಚು ತೆಗೆದು ಕುಟುಂಬದ ಸದಸ್ಯರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಏನೂ ಮಾಡಲಾಗದೆ ಬೆಂಕಿ ಕೆನ್ನಾಲಗೆಗೆ ಸಿಲುಕಿದ ಸೀತಾ (45), ಬೇಬಿ(40), ಪ್ರಾರ್ಥನಾ(6) ಮೂವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂವರು ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದ ಆರು ಮಂದಿ ಬಲಿಯಾಗಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊನ್ನಂಪೇಟೆ ಪೊಲೀಸರು ಆರೋಪಿ ಬೋಜನ ಪತ್ತೆಗಾಗಿ ಬಲೆ ಬೀಸಿದ್ದಾರೆ.