– ಘಟನೆಯಲ್ಲಿ ಕಮಲ ನಾಯಕನ ತಂದೆ, ತಮ್ಮ ಸಾವು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಬಿಜೆಪಿ ನಾಯಕ ಶೇಖ್ ವಾಸಿಮ್ ಹಾಗೂ ಅವರ ತಂದೆ ಮತ್ತು ಸಹೋದರರನ್ನು ಬಂಡಿಪೋರಾ ಜಿಲ್ಲೆಯಲ್ಲಿ ಬುಧವಾರ ಸಂಜೆ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಶೇಖ್ ವಾಸಿಮ್ ಅವರ ಕುಟುಂಬದೊಂದಿಗೆ ಅಂಗಡಿಯಲ್ಲಿ ಕುಳಿತ್ತಿದ್ದಾಗ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ವಾಸಿಮ್ ಸೇರಿದಂತೆ ಅವರ ತಂದೆ ಮತ್ತು ತಮ್ಮ ಸೇರಿ ಮೂವರೂ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ.
ಬಂಡಿಪೋರಾದಲ್ಲಿ ಬಿಜೆಪಿ ಕಾರ್ಯಕರ್ತ ವಾಸಿಮ್ ಅವರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ವಾಸೀಮ್ ಬ್ಯಾರಿ ಮತ್ತು ಅವರ ತಂದೆ ಬಶೀರ್ ಅಹ್ಮದ್ ಮತ್ತು ಸಹೋದರ ಉಮರ್ ಬಶೀರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೂವರೂ ಸಾವನ್ನಪ್ಪಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಜಮ್ಮು-ಕಾಶ್ಮೀರದ ಡಿಜಿಪಿ ದಿಲ್ಭಾಗ್ ಸಿಂಗ್ ಅವರು, ಮೃತ ವಾಸಿಮ್ ಮತ್ತು ಅವರ ಕುಟುಂಬಕ್ಕೆ ಎಂಟು ಮಂದಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಆದರೆ ಘಟನೆ ನಡೆದ ಸ್ಥಳದಲ್ಲಿ ಒಬ್ಬರು ಸೆಕ್ಯೂರಿಟಿಗಳು ಇಲ್ಲದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಕರ್ತವ್ಯ ಲೋಪ ಮಾಡಿದ ವಾಸಿಮ್ ಅವರ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.