ಚಿಕ್ಕೋಡಿ: ಕಾಲೇಜು ಕಾಂಪೌಂಡ್ಗೆ ಅಳವಡಿಸಿದ್ದ ಗೇಟ್ ಬಿದ್ದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.
ನಗರದ ಆರ್.ಡಿ.ಕಾಲೇಜಿನ ಗೇಟ್ ಬಿದ್ದು 10 ವರ್ಷದ ಬಾಲಕ ಸೂಫಿಯಾನ್ ರಾಜು ಮುಲ್ಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗೇಟ್ ದಾಟಿ ಮನೆಗೆ ಹೊರಟಿದ್ದ ಸಂದರ್ಭದಲ್ಲಿ ಗೇಟ್ ಬಿದ್ದಿದೆ. ಸರಿಯಾಗಿ ಜೋಡಣೆ ಮಾಡದ ಕಾರಣ ಮಳೆಯಲ್ಲಿ ಶಿಥೀಲಗೊಂಡಿದ್ದ ಗೇಟ್ ಬಿದ್ದಿದೆ.
ನಗರದ ಇಂದಿರಾನಗರ ನಿವಾಸಿ ಸೂಫಿಯಾನ್ ಸಾವನ್ನಪ್ಪಿದ್ದು, ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕಾಲೇಜು ಆಡಳಿತ ಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.