– ಯಾರ ಸಹಾಯವಿಲ್ಲದೆ ಕೆಲಸ
ಚಿತ್ರದುರ್ಗ: ಅಂಗಾಂಗಗಳೆಲ್ಲ ಸರಿ ಇದ್ದರೂ ಸರಿಯಾಗಿ ಕೆಲಸ ಮಾಡದೆ ಸೋಮಾರಿತನ ತೋರುವ ಯುವಕರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಂಗವಿಕಲ ರೈತ ಕಾಲುಗಳು ಸ್ವಾಧೀನ ಕಳೆದುಕೊಂಡರೂ ಯಾರ ನೆರವಿಲ್ಲದೆ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಇತರ ಯುವಕರಿಗೆ ಮಾದರಿಯಾಗಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಸೂರಪ್ಪನಹಟ್ಟಿ ಗ್ರಾಮದ ಬಾಲಣ್ಣ ವಿಶೇಷಚೇತನರಾಗಿದ್ದು, ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಆದರೂ ಎದೆಗುಂದದೆ, ಯಾರ ನೆರವಿಲ್ಲದೆ ಜಮೀನಿನಲ್ಲಿ ಉಳುಮೆ ಮಾಡಿ ಬದುಕಿನ ಬಂಡಿ ಸಾಗಿಸುವ ಮೂಲಕ ಪತ್ನಿ ಹಾಗೂ ಮಗನನ್ನು ಸಾಕುತ್ತಿದ್ದಾರೆ.
ಓಡಾಡಲು ಕಾಲಿಲ್ಲದೆ, ಎದ್ದು ನಿಲ್ಲಲು ಸೊಂಟವಿಲ್ಲದೇ ನೆಲದ ಮೇಲೆ ತೆವಳುವ ರೈತ ಬಾಲಣ್ಣ, ವಿಶೇಷಚೇತನನಾದರೂ ಮತ್ತೊಬ್ಬರ ಸಹಾಯ ಪಡೆಯದೇ ತುಂಡು ಭೂಮಿಯಲ್ಲಿ ಉಳುಮೆ ಮಾಡಿ ಸೌತೆಕಾಯಿ, ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಯುತ್ತ ಬದುಕು ಕಟ್ಟಿಕೊಂಡು ಛಲಗಾರ ಎನಿಸಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಮಂಗಳೂರಿನ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಜರುಗಿದ ಅವಘಡದಿಂದಾಗಿ ಕಾಲುಗಳು ಸ್ವಾಧೀನ ಕಳೆದುಕೊಂಡವು.
ಅಂದಿನಿಂದಲೂ ಎದೆಗುಂದದೆ ಛಲದಿಂದ ಬದುಕುತ್ತಿರುವ ಬಾಲಣ್ಣ, ಯಾರ ಹಂಗಿನಲ್ಲೂ ಇರದೇ ತನ್ನ ತುಂಡು ಭೂಮಿಯಲ್ಲಿ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಗನನ್ನು ವಿದ್ಯಾವಂತನನ್ನಾಗಿಸಬೇಕು ಹೀಗಾಗಿ ಭೂತಾಯಿ ನಂಬಿಕೊಂಡು ದುಡಿಯುತಿದ್ದೇನೆ ಎನ್ನುತ್ತಾರೆ ಬಾಲಣ್ಣ. ಯಾವುದೇ ಸುಲಭ ದಾರಿಗಳತ್ತ ಚಿಂತಿಸದೆ, ಕುಟುಂಬಸ್ಥರು ಹಾಗೂ ಗ್ರಾಮದ ಬೇರೆಯವರ ನೆರವು ಪಡೆಯದೆ ಶ್ರಮಿವಹಿಸಿ ತಮ್ಮ ಜಮೀನಿನಲ್ಲಿ ದುಡಿಯುವ ಮೂಲಕ ಸ್ವಾವಲಂಬಿಯಾಗಿ ಬದುಕು ಸಾಗಿಸುವ ಮೂಲಕ ಇತರರಿಗೆ ಮಾದರಿ ರೈತ ಎನಿಸಿದ್ದಾರೆ.
ವಿಶೇಷ ಚೇತನ ಬಾಲಣ್ಣ ಅವರಿಗೆ ಸರ್ಕಾರದಿಂದ ಅಂಗವಿಕಲರ ಪಿಂಚಣಿ ಬಂದರೂ ಸರಿಯಾಗಿ ಇವರ ಕೈ ಸೇರಿಲ್ಲ. ಅಲ್ಲದೆ ಬದುಕಲ್ಲಿ ಇನ್ನಷ್ಟು ಸಾಧಿಸುವ ಹಂಬಲವಿರುವ ಬಾಲಣ್ಣ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ತ್ರಿಚಕ್ರ ವಾಹನ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಈವರೆಗೆ ಬೈಕ್ ಸಿಕ್ಕಿಲ್ಲ. ಇವರ ಶ್ರಮ ಕಂಡು ನಿಬ್ಬೆರಗಾಗಿರುವ ಗ್ರಾಮದ ಯುವಕರು ಬಾಲಣ್ಣನ ಕಾರ್ಯ ಮೆಚ್ಚಿ ಮನಸಾರೆ ಹೊಗಳುತಿದ್ದು, ನಮಗೆಲ್ಲ ಇವರು ಸ್ಫೂರ್ತಿ ಎನ್ನುತ್ತಿದ್ದಾರೆ. ಅಲ್ಲದೆ ಇಂತಹ ಸಾಧಕನಿಗೆ ಸರ್ಕಾರದಿಂದ ಒಂದು ಮನೆ ಹಾಗೂ ತ್ರಿಚಕ್ರ ವಾಹನ ನೀಡಬೇಕೆಂದು ಮನವಿ ಮಾಡಿದ್ದಾರೆ.