ಚಿಕ್ಕಬಳ್ಳಾಪುರ: ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಪೊಲೀಸ್ ಪೇದೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕುರುಬರಹಳ್ಳಿಯಲ್ಲಿ ಸಂಭವಿಸಿದೆ.
ಇಂದು ಡಿಕೆಶಿ ಮಗಳ ಆರತಕ್ಷತೆ ದೇವನಹಳ್ಳಿ-ನಂದಿಬೆಟ್ಟ ರಸ್ತೆಯ ಪ್ರೇಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‍ನಲ್ಲಿ ನಡೆಯಲಿದ್ದು, ರೆಸಾರ್ಟ್ ಬಳಿ ಬಂದೋಬಸ್ತ್ ಕರ್ತವ್ಯಕ್ಕೆ ಹನುಮಯ್ಯ ತಮ್ಮದೇ ಒಮ್ನಿ ಕಾರಿನಲ್ಲಿ ತೆರಳಿದ್ದಾರೆ.
ಈ ವೇಳೆ ಡಾಬಸ್ ಪೇಟೆ ಕಡೆಗೆ ತೆರಳುತ್ತಿದ್ದ ಲಾರಿ, ದ್ವಿಚಕ್ರ ವಾಹನವನ್ನು ಒವರ್ ಟೇಕ್ ಮಾಡಲು ಹೋಗಿ ದೊಡ್ಡಬಳ್ಳಾಪುರದ ಕಡೆ ಬರುತ್ತಿದ್ದ ಮಾರುತಿ ಒಮ್ನಿ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹೊಸಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಹುಲಿಕುಂಟೆಯ ಹನುಮಯ್ಯ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.