ಕಾರವಾರ ಸಮುದ್ರದ ತೀರ ಪ್ರದೇಶದಲ್ಲಿ ನೀಲಿ ಬೆಳಕಿನ ವಿಸ್ಮಯ!

Public TV
2 Min Read
KWR copy

– ಏನು ಹೇಳುತ್ತೆ ವಿಜ್ಞಾನ..?

ಕಾರವಾರ: ರಾತ್ರಿಯಿಂದ ಮುಂಜಾನೆವರೆಗೆ ಕಡಲ ತೀರ ಪ್ರದೇಶದಲ್ಲಿ ನೀಲಿ ಬೆಳಕಿನ ವಿಸ್ಮಯ ಕಾರವಾರದ ತಿಳಮಾತಿ ಬೀಚಿನಿಂದ ಕಾಳಿ ಸಂಗಮದವರೆಗೂ ಕಾಣುತ್ತಿದ್ದು, ಸಮುದ್ರ ತೀರದಲ್ಲಿ ಮುಂಜಾನೆ ಹೆಜ್ಜೆ ಹಾಕುವ ವಾಯು ವಿಹಾರಿಗಳಿಗೆ ಈ ನೀಲಿ ಬೆಳಕಿನ ವಿಸ್ಮಯ ಗೋಚರಿಸಿದೆ.

ಹೌದು. ತಿಳಮಾತಿ ಬೀಜಿನಿಂದ ಕಾರವಾರದ ಕಾಳಿ ಸಂಗಮದ ಸಮುದ್ರ ತೀರದಲ್ಲಿ ಪಾಚಿಗಳು ಹೇರಳವಾಗಿ ಬಂದು ಸೇರುತ್ತಿದೆ. ಈ ಪಾಚಿಗಳು ಸಮುದ್ರದ ಅಲೆಗೆ ತೇಲಿ ಬರುತ್ತಿದ್ದು ಕೆಲತೀರವನ್ನು ಆವರಿಸಿದೆ. ಹೀಗಾಗಿ ಮುಂಜಾನೆ ವಾಯು ವಿಹಾರಕ್ಕೆ ತೆರಳಿದವರ ಹೆಜ್ಜೆ ಗುರುತುಗಳಲ್ಲಿ ನೀಲಿ ಬಣ್ಣಗಳ ಬೆಳಕು ಮೂಡಿ ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸಿದೆ.

KWR 1 copy

ನೀಲಿ ಬೆಳಕಿನ ವಿಸ್ಮಯಕ್ಕೆ ವೈಜ್ಞಾನಿಕ ಕಾರಣವೇನು?:
ವೈಜ್ಞಾನಿಕವಾಗಿ ‘ಡೈನೋಫ್ಲಾಗೆಲೆಟ್ ನಾಕ್ಟಿಲುಕ ಸಿಂಟಿಲನ್ಸ್’ (Dinoflagellate Noctiluca scintillans) ಎಂಬ ಸೂಕ್ಷ್ಮಜೀವಿಗಳು ದೇಹದಿಂದ ರಾಸಾಯನಿಕವನ್ನು ಸ್ರವಿಸಿದಾಗಿ ನೀಲಿ ಬಣ್ಣದ ಬೆಳಕು ಮೂಡುತ್ತದೆ. ಮಿಂಚುಹುಳುವಿನ ಮಾದರಿಯಲ್ಲಿ ಹೊಳೆಯುತ್ತವೆ. ಒಂದೇ ಜೀವಕೋಶ ಹೊಂದಿರುವ ಈ ಸೂಕ್ಷ್ಮಜೀವಿಗಳು, ಲಕ್ಷಾಂತರ ಸಂಖ್ಯೆಯಲ್ಲಿ ಒಂದೆಡೆ ಸೇರಿದಾಗ ಇಂತಹ ವಿದ್ಯಮಾನ ಗೋಚರಿಸುತ್ತದೆ ಎಂದು ವಿಜ್ಞಾನ ಜಗತ್ತು ಹೇಳುತ್ತದೆ.

ಈ ಕುರಿತು ಮಾಹಿತಿ ನೀಡಿದ ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಹರಗಿ, ಕಳೆದ ಬಾರಿ ಭಟ್ಕಳದವರೆಗೂ ಕಡಲತೀರದಲ್ಲಿ ಕಾಣಿಸಿಕೊಂಡಿದ್ದವು. ಈ ಬಾರಿ ಗೋಕರ್ಣದವರೆಗೂ ಗೋಚರಿಸಿದ್ದಾಗಿ ತಿಳಿದುಬಂದಿದೆ. ಸಮುದ್ರದಲ್ಲಿ ಅವುಗಳಿಗೆ ಪೂರಕವಾದ ವಾತಾವರಣ ಕಂಡುಬಂದಾಗ ಹುಲುಸಾಗಿ ಬೆಳೆಯುತ್ತವೆ ಎಂದರು.

KWR FLASH SEA AV 10

ನದಿಯಲ್ಲಿರುವ ಪೋಷಕಾಂಶಗಳು ಮಳೆಗಾಲದಲ್ಲಿ ಸಮುದ್ರಕ್ಕೆ ಸೇರುತ್ತವೆ. ಜೊತೆಗೆ ಅದೆಷ್ಟೋ ಚರಂಡಿಗಳ ನೀರು ಕೂಡ ಸಮುದ್ರದಲ್ಲಿ ವಿಲೀನವಾಗುತ್ತದೆ. ಇದರಿಂದ ಆಲ್ಗೆಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶ ಸಿಗುತ್ತದೆ. ಜೊತೆಗೆ ಬಿಸಿಲು ಕೂಡ ಇರುವುದು ಅವುಗಳಿಗೆ ಅನುಕೂಲಕರ ವಾತಾವರಣ ಉಂಟುಮಾಡುತ್ತದೆ. ಸಮುದ್ರದಾಳದಲ್ಲಿ ಹೂಳೆತ್ತುವಂಥ ಕಾರ್ಯಗಳ ಮೂಲಕ ಮನುಷ್ಯನ ಹಸ್ತಕ್ಷೇಪ ಹೆಚ್ಚಾಗುವುದೂ ಇದಕ್ಕೆ ಕಾರಣಗಳಲ್ಲಿ ಒಂದು ಎಂದು ಅವರು ವಿವರಿಸಿದರು. ಇದನ್ನೂ ಓದಿ: ಕಾರವಾರದ ಸಮುದ್ರದಲ್ಲಿ ವಿಸ್ಮಯ- ಅಲೆಯಲ್ಲಿ ಮೂಡಿತು ಬೆಳಕಿನ ಮಿಂಚು

ಕೆಲವು ವರ್ಷಗಳ ಹಿಂದಿನವರೆಗೆ ಬಾಂಗ್ಡೆ, ತಾರ್ಲಿ ಮೀನುಗಳು ಹೆಚ್ಚಿರುತ್ತಿದ್ದವು. ಅವುಗಳು ಆಲ್ಗೆಗಳನ್ನು ತಿನ್ನುತ್ತಿದ್ದ ಕಾರಣ ನಿಯಂತ್ರಣದಲ್ಲಿ ಇರುತ್ತಿದ್ದವು. ಆದರೆ ಈಚೆಗೆ ಈ ಮೀನುಗಳ ಸಂತತಿ ಕಡಿಮೆಯಾಗಿದೆ. ಈ ಪ್ರಭೇದದ ಆಲ್ಗೆಯೊಂದೇ ಸಮುದ್ರದಲ್ಲಿ ಬೆಳೆಯುತ್ತಿದ್ದು, ಇತರ ಜಾತಿಯವು ಹೆಚ್ಚಾಗಲು ಅವಕಾಶವಿಲ್ಲದಂತಾಗಿದೆ. ಇದು ಒಂದು ರೀತಿಯಲ್ಲಿ ಮೀನುಗಳಿಗೆ ಆಹಾರದ ಕೊರತೆಯಾಗಲೂ ಕಾರಣವಾಗಿದೆ. ಹೀಗಾಗಿ ಮೀನುಗಳು ಸೊರಗಿ ಮೀನುಗಾರಿಕೆಯೂ ಕುಂಠಿತವಾಗುತ್ತದೆ ಎಂದು ತಿಳಿಸಿದರು.

KWR 3 copy

ಕಳೆದ ವರ್ಷವೂ ಗೋಚರಿಸಿತ್ತು..!:
ನೀಲಿ ಬೆಳಕು ಸೂಸುವ ಪಾಚಿಗಳು ಕಳೆದ ವರ್ಷ ಕಾರವಾರದ ತಿಳಮಾತಿ ತೀರದಲ್ಲಿ ಗೋಚರಿಸಿತ್ತು. ಕಳೆದಬಾರಿ ದೊಡ್ಡ ಪ್ರಮಾಣದಲ್ಲಿ ಇಲ್ಲದಿದ್ದರೂ ಒಂದು ವಾರಕ್ಕೊ ಹೆಚ್ಚು ಸಮಯ ಈ ಪಾಚಿಗಳು ಗೋಚರಿಸುವ ಮೂಲಕ ನೀಲಿ ಬಣ್ಣದ ಬೆಳಕನ್ನ ಮೂಡಿಸಿ ವಿಸ್ಮಯ ಸೃಷ್ಟಿಸಿದ್ದವು.

ನೀಲಿ ಬೆಳಕು ಸೂಸುವ ಪಾಚಿ ಮಾದರಿಯ ಅಧ್ಯಯನ:
ಬೆಳಕು ಸೂಸುವ ಆಲ್ಗೆಗಳು 1949ರಲ್ಲಿ ಮೊದಲ ಬಾರಿಗೆ ಲಕ್ಷದ್ವೀಪದಲ್ಲಿ ಕಾಣಿಸಿಕೊಂಡವು. ಕಾರವಾರದಲ್ಲಿ 2017ರಲ್ಲಿ ಮೊದಲ ಬಾರಿಗೆ ದಾಖಲಾಯಿತು. ಮೂರು ವರ್ಷಗಳಿಂದ ಗೋಚರಿಸಲು ಕಾರಣವೇನು ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಲಾಗುತ್ತದೆ ಎಂದು ಡಾ.ಶಿವಕುಮಾರ್ ಹರಗಿ ಪಬ್ಲಿಕ್ ಟಿವಿಗೆ ತಿಳಿಸಿದರು.

KWR FLASH SEA AV 2 copy

Share This Article
Leave a Comment

Leave a Reply

Your email address will not be published. Required fields are marked *