ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಹವಾಮಾನ ಮತ್ತು ಸಮುದ್ರದ ವಾತಾವರಣದಲ್ಲಿ ಬದಲಾವಣೆಯಿಂದಾಗಿ ಸಮುದ್ರದಲ್ಲಿ ಸೃಷ್ಟಿಯ ವೈಚಿತ್ರಗಳು ನಡೆಯುತ್ತಿದೆ. ಕಾರವಾರದ ಗೋವಾ ಗಡಿಗೆ ಅಂಟಿಕೊಂಡಿರುವ ಮಾಜಾಳಿ ಕಡಲ ಬಳಿ ಅಲೆಗಳಲ್ಲಿ ಮಿಂಚಿನ ಬೆಳಕು ಕಾಣತೊಡಗಿದೆ.
ರಾತ್ರಿ ವೇಳೆ ಬೆಳಕು ಗೋಚರವಾಗುತ್ತಿದ್ದು, ಮಾಜಾಳಿಯಿಂದ ಕಪ್ಪು ಮರಳಿನ ಸಮುದ್ರ ಎಂದೇ ಪ್ರಸಿದ್ಧವಾಗಿರುವ ತಿಳಮಾತಿ ಕಡಲತೀರದವರೆಗೂ ಆವರಿಸಿದೆ. ಕಳೆದ ಒಂದು ವಾರದಿಂದ ಸಮುದ್ರದಲ್ಲಿ ಈ ಬೆಳವಣಿಗೆ ಕಾರಣವಾಗುತ್ತಿದೆ. ಈ ಬದಲಾವಣೆಯನ್ನು ಧಾರವಾಡ ವಿಶ್ವವಿದ್ಯಾನಿಲಯದ ಕಡಲ ಜೀವಶಾಸ್ತ್ರಜ್ಞ ಶಿವಕುಮಾರ್ ಹರಗಿರವರು ಗುರುತಿಸಿದ್ದಾರೆ.
Advertisement
Advertisement
ಅಲೆಗಳಲ್ಲಿ ಬೆಳಕು ಮೂಡುತ್ತಿರಲು ಕಾರಣವೇನು?
ಸಮುದ್ರದಲ್ಲಿ ಮಲೀನದಿಂದಾಗಿ ನಾಕ್ಟುಲುಕ ಸೆಂಟನೆಲ್ಸ್ (noctiluca seintillans)ಎಂಬ ಪಾಚಿ ಹೇರಳವಾಗಿ ಬೆಳೆದಿದೆ. ಇದು ರಾತ್ರಿ ವೇಳೆ ಸಮುದ್ರದಲ್ಲಿ ಮಿಂಚಿನಂತೆ ಕಾಣುತಿದ್ದು, ಬೆಳಕನ್ನು ಹೊರಸೂಸುತ್ತಿದೆ. ತನ್ನಲ್ಲಿ ಬೆಳಕನ್ನು ಸೂಸುವ ಶಕ್ತಿ ಹೊಂದಿರುವ ಇದು ಸಮುದ್ರಕ್ಕೆ ಸೇರುವ ತ್ಯಾಜ್ಯಗಳ ಖನಿಜಾಂಶದಿಂದ ಹೆಚ್ಚು ಬೆಳೆದಿದೆ. ಈ ಹಿಂದೆ 2011ರಲ್ಲಿ ಮಂಗಳೂರಿನಲ್ಲಿ, 2017ರಲ್ಲಿ ಉಡುಪಿ, ಕಾರವಾರದ ಕಡಲತೀರದ ಬಳಿ ಹೇರಳವಾಗಿ ಕಾಣಿಸಿಕೊಂಡಿದ್ದವು. ಇವು ಹೆಚ್ಚಾದಾಗ ಸಮುದ್ರ ಹಸಿರಿನಂತೆ ಕಂಗೊಳಿಸುತ್ತವೆ.
Advertisement
ಮೀನುಗಾರಿಕೆಗೂ ಬೀರಲಿದೆ ಇದರ ಪರಿಣಾಮ!
ಜಿಲ್ಲೆಯ ಮೀನುಗಾರರು ಈಗಾಗಲೇ ಮತ್ಸ್ಯ ಕ್ಷಾಮದಿಂದ ಬಳಲುತ್ತಿದ್ದಾರೆ. ಈ ಸಸ್ಯಗಳು ಬೆಳೆದಿದ್ದರಿಂದ ಮೀನುಗಾರಿಕೆ ಮೇಲೂ ಪರಿಣಾಮ ಬೀರುವ ಜೊತೆಗೆ ಮಾರಕವಾಗಿದ್ದು, ಪರಿಸರದ ಅಸಮತೋಲನಕ್ಕೆ ಸಾಕ್ಷಿಯಾಗಿದೆ ಎಂಬುದು ಸಂಶೋಧನೆ ನಿರತ ಕಡಲ ಜೀವಶಾಸ್ತ್ರಜ್ಞ ಡಾ.ಶಿವಕುಮಾರ್ ಹರಗಿ ರವರ ಅಭಿಪ್ರಾಯವಾಗಿದೆ.
Advertisement
ಈ ಪಾಚಿಗಳು ಬೆಳೆಯುವುದರಿಂದ ಮೀನುಗಳು ದೂರ ಹೋಗುತ್ತದೆ ಇದು ಮತ್ಸ್ಯ ಕ್ಷಾಮದ ಸೂಚನೆ. ಈ ಪಾಚಿ ಸಸ್ಯ ಆಕ್ಸಿಜನ್ ತೆಗೆದುಕೊಂಡು ಬೆಳಕನ್ನು ಹೊರಸೂಸುತ್ತದೆ. ದಕ್ಷಿಣ ಕರಾವಳಿಯಲ್ಲಿ ಹೆಚ್ಚು ಪತ್ತೆಯಾಗುತ್ತಿದೆ. ಆಹಾರ ಸಿಕ್ಕಾಗ ಅತಿಯಾಗಿ ಬೆಳೆಯುತ್ತದೆ. ತ್ಯಾಜ್ಯ ಹೆಚ್ಚು ಸಮುದ್ರ ಸೇರುವುದರಿಂದ ಇವು ಹೆಚ್ಚು ಬೆಳೆಯುತ್ತದೆ. ತ್ಯಾಜ್ಯದ ಖನಿಜಾಂಶ ಹಾಗೂ ಸೂರ್ಯನ ಬೆಳಕು ಇವುಗಳ ಆಹಾರ. ಪಶ್ಚಿಮ ಕರಾವಳಿಯಲ್ಲಿ ಆಗುತ್ತಿರುವ ಹೆಚ್ಚಿನ ಮಾಲಿನ್ಯ ಇವುಗಳ ಬೆಳವಣಿಗೆಗೆ ಕಾರಣವಾಗಿದೆ.
ಸದ್ಯ ಕಾರವಾರದ ಸಮುದ್ರದಲ್ಲಿ ಈ ಪಾಚಿಗಳು ಎರಡು ಮೂರು ದಿನ ಉಳಿಯಬಹುದು. ಯಾಕೆಂದರೆ ಬೇಸಿಗೆಯಲ್ಲಿ ಜಾಸ್ತಿ ಪ್ರಮಾಣದಲ್ಲಿ ಪಾಚಿ ಬೆಳೆಯುತ್ತಿದೆ. ಏಳು ದಿನ ಇವು ಬದುಕುತ್ತವೆ. ನಂತರ ಎರಡುಪಟ್ಟಾಗಿ ಬೆಳೆಯುತ್ತದೆ. ಇವುಗಳಲ್ಲಿ ರೆಡ್, ಗ್ರೀನ್ ಟೈಡ್ ಎಂಬ ಜಾತಿಯ ಪ್ರಭೇದ ಪಾಚಿಗಳಿವೆ. ಇವುಗಳು ಟಾಕ್ಸಿನ್ ಹೆಚ್ಚು ಉತ್ಪತ್ತಿ ಮಾಡುತ್ತದೆ. ಕೆಲವೊಮ್ಮೆ ಇವುಗಳು ಉಪಯುಕ್ತವಾದರೆ ಹಲವು ಬಾರಿ ಮಾರಕವಾಗಿ ಪರಿಣಮಿಸುತ್ತದೆ ಎಂಬುದು ಸಂಶೋಧಕರ ಮಾತು.
ಮೀನುಗಾರರಲ್ಲಿ ಹುಟ್ಟಿದ ಭಯ?
ಕಳೆದ ಹಲವು ದಿನದಿಂದ ಸಮುದ್ರದಲ್ಲಿ ಆಗುವ ಈ ಬೆಳವಣಿಗೆ ಮೀನುಗಾರರಲ್ಲಿ ಭಯ ಮೂಡಿಸಿದೆ. ಸ್ಥಳೀಯ ಮೀನುಗಾರರು ಹೇಳುವಂತೆ ಈ ರೀತಿ ಮಿಂಚುಗಳ ಬೆಳಕು ಬಂದರೆ ಸಮುದ್ರದಲ್ಲಿ ಮೀನುಗಳು ಬರುವುದಿಲ್ಲ ಎಂದಿದ್ದಾರೆ.
ಸಂಶೋಧಕರು ಕೂಡ ಇದನ್ನು ಪುಷ್ಟಿಕರಿಸಿದ್ದು, ಸಮುದ್ರಕ್ಕೆ ಮಲೀನ ನೀರುಗಳು ಅತಿ ಹೆಚ್ಚು ಸೇರುತ್ತಿದೆ. ಇದರಿಂದಾಗಿ ಈ ಪಾಚಿಗಳು ಹೇರಳವಾಗಿ ಬೆಳೆಯಲು ಕಾರಣವಾಗಿದೆ. ಇದು ಸಮುದ್ರದ ವಾತಾವರಕ್ಕೆ ಪೂರಕವಾಗಿಲ್ಲ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ ಎನ್ನುತ್ತಾರೆ. ಕಳೆದ ಒಂದು ವರ್ಷಗಳಿಂದ ಜಿಲ್ಲೆಯ ಕರಾವಳಿ ಭಾಗದ ಸಮುದ್ರ ಭಾಗದಲ್ಲಿ ನೈಸರ್ಗಿಕ ಬದಲಾವಣೆ ಹೆಚ್ಚಾಗುತ್ತಿದೆ.