ಚಿಕ್ಕಮಗಳೂರು: ಜನಜಂಗುಳಿಯಿಂದ ಕೂಡಿರುವ ರಸ್ತೆ. ರಸ್ತೆಯ ಆರಂಭ ಹಾಗೂ ಅಂತ್ಯದ ಎರಡೂ ಬದಿಯಲ್ಲೂ ಪೊಲೀಸರು. ಈ ರೀತಿಯ ಜನವಸತಿ ರಸ್ತೆಯಲ್ಲಿ ಹಾಡಹಗಲೇ ಗುಂಡಿನ ಶಬ್ಧ ಕೇಳಿ ನಗರದ ಜನ ಆತಂಕಕ್ಕೀಡಾಗಿದ್ದಾರೆ.
ನಗರದ ಎಂ.ಜಿ.ರಸ್ತೆಯ ಅಂಡೇ ಛತ್ರ ವೃತ್ತದ ಬಳಿ ಇರುವ ಕೇಸರಿ ಜ್ಯುವೆಲರಿ ಶಾಪ್‍ಗೆ ಬಂದ ಮೂವರು ದರೋಡೆಕೋರರು ದರೋಡೆಗೆ ಯತ್ನಿಸಿದ್ದಾರೆ. ಪಲ್ಸರ್ ಬೈಕಿನಲ್ಲಿ ಬಂದ ಮೂವರು ಅಂಗಡಿ ಬಾಗಿಲಲ್ಲಿ ಬೈಕ್ ನಿಲ್ಲಿಸಿ ಒಳ ಹೋಗಿದ್ದಾರೆ. ಬೈಕ್ ರೈಡ್ ಮಾಡುತ್ತಿದ್ದವ ಮಾಸ್ಕ್ ಹಾಗೂ ಹೆಲ್ಮೆಟ್ ಹಾಕಿಕೊಂಡಿದ್ದ. ಉಳಿದ ಇಬ್ಬರು ತಲೆಗೆ ಟೋಪಿ, ಗುರುತು ಸಿಗದಂತೆ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಬೈಕ್ ಇಳಿದು ಅಂಗಡಿ ಒಳಗೆ ಹೋದ ಮೂವರು ಅಂಗಡಿಯಲ್ಲಿದ್ದ ಚಿನ್ನವನ್ನು ಚೀಲಕ್ಕೆ ತುಂಬುವಂತೆ ಹೇಳಿದ್ದಾರೆ. ಅಂಗಡಿ ಮಾಲೀಕ ವಿರೋಧಿಸಿದ್ದಕ್ಕೆ ಜೇಬಿನಲ್ಲಿದ್ದ ಪಿಸ್ತೂಲ್ ತೆಗೆದು ಹೆದರಿಸಿದ್ದಾರೆ. ಆದರೆ ಅಂಗಡಿ ಮಾಲೀಕ ಹೆದರದೆ ಅವರ ವಿರುದ್ಧ ತಿರುಗಿ ಬಿದ್ದಿದ್ದರಿಂದ ಆತನ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಅಂಗಡಿ ಮಾಲೀಕ ಫೈರಿಂಗ್ ನಿಂದ ತಪ್ಪಿಸಿಕೊಂಡು ಕೂಗಾಡಿದ್ದಾನೆ. ಈ ವೇಳೆ ದರೋಡೆಗೆ ಬಂದಿದ್ದ ದರೋಡೆಕೋರರು ಹೆದರಿ ಬೈಕ್ ಹತ್ತಿಕೊಂಡು ನಾಪತ್ತೆಯಾಗಿದ್ದಾರೆ.
ಗುಂಡಿನ ದಾಳಿ ವೇಳೆ ಅಂಗಡಿ ಮಾಲೀಕನ ಕಾಲಿಗೆ ಸಣ್ಣ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅಂಗಡಿ ಮಾಲೀಕನಿಂದ ಮಾಹಿತಿ ಕಲೆಹಾಕಿದ್ದಾರೆ. ಅಕ್ಕಪಕ್ಕದ ಅಂಗಡಿಗಳಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಶೀಘ್ರವೇ ದರೋಡೆಕೋರರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ದರೋಡೆಕೋರರ ಬಂಧನಕ್ಕೆ ತಂಡ ರಚಿಸಿ ಶೀಘ್ರವೇ ಅವರನ್ನು ಬಂಧಿಸುವುದಾಗಿ ತಿಳಿಸಿದರು.