ಚಿಕ್ಕಮಗಳೂರು: ಗಾನ ಕೋಗಿಲೆ, ಸಾವಿರಾರು ಹಾಡುಗಳ ಸರದಾರ, ಸಂಗೀತದ ಮಾಂತ್ರಿಕ, ಸ್ವರಭಾಸ್ಕರ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಹೆಜ್ಜೆ ಗುರುತುಗಳು ಕಾಫಿನಾಡಲ್ಲೂ ಮೂಡಿವೆ.
ದಂಪತಿ ಸಮೇತ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಶ್ರೀಗಳ ಆಶೀರ್ವಾದ ಪಡೆದಿದ್ದರು. ಕ್ರೇಜಿಸ್ಟಾರ್ ಸ್ಟಾರ್ ರವಿಚಂದ್ರನ್ ಅಭಿನಯದ ಮಾಂಗಲ್ಯಂ ತಂತು ನಾನೇನ, ಜಯಸೂರ್ಯ ಚಿತ್ರದಲ್ಲಿ ಸಾಯಿಬಾಬಾರ ಭಕ್ತನಾಗಿ, ಮಣಿಕಂಠನ ಮಹಿಮೆ, ಬಾಳೊಂದು ಚದುರಂಗ, ತಿರುಗುಬಾಣ, ಮಹಾಯಡಬಿಡಂಗಿ, ಕಲ್ಯಾಣೋತ್ಸವ, ಮುದ್ದಿನ ಮಾವ ಸೇರಿದಂತೆ ವಿವಿಧ ಭಾಷೆಗಳ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು.
ಶಶಿಕುಮಾರ್, ಶೃತಿ ಅಭಿನಯದ ಮುದ್ದಿನ ಮಾವ ಚಿತ್ರದ ಚಿತ್ರೀಕರಣಕ್ಕಾಗಿ ಜಿಲ್ಲೆಯ ಶೃಂಗೇರಿ, ಹೊರನಾಡು, ಕಳಸ ಸೇರಿದಂತೆ ಧಾರ್ಮಿಕ ಹಾಗೂ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಪಡೆದಿದ್ದರು. ಇಲ್ಲಿ ಚಿತ್ರೀಕರಣವೂ ನಡೆದಿತ್ತು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಲವು ಸಂಗೀತದ ಕಾರ್ಯಕ್ರಮಗಳನ್ನು ಕಾಫಿನಾಡಿನಲ್ಲಿ ನಡೆಸಿಕೊಟ್ಟಿದ್ದಾರೆ.
2006ರಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಆವರಣದಲ್ಲಿ ನಡೆದ ಸಂಗೀತದ ಕಾರ್ಯಕ್ರಮಕ್ಕೂ ಅವರು ಆಗಮಿಸಿದ್ದರು. ಆದರೆ ಬಾಳೆಹೊನ್ನೂರಿನಲ್ಲಿ ಭಾರೀ ಮಳೆ ಸುರಿದಿದ್ದರಿಂದ ಅಂದು ಕಾರ್ಯಕ್ರಮ ನಡೆದಿರಲಿಲ್ಲ. ಜನ ಗಾನ ಗಂಧರ್ವನ ನೋಡಲು ಮುಗಿಬಿದ್ದಿದ್ದರು. ಅಂದು ದಂಪತಿ ಸಮೇತ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದರು. ಮಠದಲ್ಲಿ ಓಡಾಡಿ ಕಾಲ ಕಳೆದಿದ್ದರು.