ಮಂಗಳೂರು: ಸರ್ಕಾರ ಹಾಗೂ ಇಲಾಖೆಯ ಆಶಯದಂತೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು ನೀಡುವ ಉದ್ದೇಶದಿಂದ ಕಾನೂನು ಪಾಲಕರಿಗೆ ರಕ್ಷಣೆ ನೀಡುವ ಜೊತೆಗೆ ಸಮಾಜ ವಿರೋಧಿಗಳು, ಕಾನೂನು ಮೀರಿ ವರ್ತಿಸುವವರಿಗೆ ಹಾಗೂ ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುವರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ನಗರದ ಪ್ರೆಸ್‍ಕ್ಲಬ್‍ನಲ್ಲಿ ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಮೀಡಿಯಾ ಹೆಲ್ತ್ ಕ್ಲಿನಿಕ್‍ಗೆ ಮರು ಚಾಲನೆ ನೀಡಿ ಬಳಿಕ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ಅಧಿಕಾರ ಸ್ವೀಕರಿಸಿದ ಎರಡು ದಿನಗಳಿಂದಲೇ ನಗರದ ಬೀಚ್, ಮೈದಾನಗಳಲ್ಲಿ ರಾತ್ರಿ ಹೊತ್ತು ಮದ್ಯಪಾನ, ಲೌಡ್ ಸ್ಪೀಕರ್ ಹಾಡು, ಗಾಂಜಾ ಸೇವನೆ ಕುರಿತಂತೆ ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದು ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ಮಾಡಲಾಗಿದೆ. ಇದಕ್ಕೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿರುವ ಜೊತೆಗೆ ಕೆಲವರಿಂದ ಆಕ್ಷೇಪವೂ ವ್ಯಕ್ತವಾಗಿದೆ.
Advertisement
Advertisement
ಡ್ರಗ್ಸ್ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಹಿಂದಿನ ಪ್ರಕರಣಗಳ ಆರೋಪಿಗಳ ಪರೇಡ್ ನಡೆಸಿದ ಸಂದರ್ಭವೂ ಕೆಲವೊಂದು ಆಕ್ಷೇಪಣೆ ವ್ಯಕ್ತವಾಗಿದೆ. ಕಾರ್ಯಾಚರಣೆಯ ಮೇಲೆ ಯಾರಿಗೂ ಅವಮಾನ ಮಾಡುವ ಕೆಲಸವಾಗಲಿ, ಹೊಡೆಯುವ ಕೆಲಸವಾಗಿ ಇಲಾಖೆಯಿಂದ ಆಗಿಲ್ಲ. ಮಾತ್ರವಲ್ಲದೆ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಈ ಕಾರ್ಯಾಚರಣೆಗಳು ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಲಿದೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಿದೆ ಎಂದು ಅವರು ಹೇಳಿದರು.
Advertisement
ಬೀಚ್ ಟೂರಿಸಂ ಮಂಗಳೂರಿನ ಪ್ರಮುಖ ಆಕರ್ಷಣೆ. ಆದರೆ ರಾತ್ರಿ ಹೊತ್ತಿನಲ್ಲಿ ಬೀಚ್‍ನಿಂದ ಸುಮಾರು ಒಂದರಿಂದ ಒಂದೂವರೆ ಕಿ.ಮೀ. ದೂರದ ಕತ್ತಲು ಪ್ರದೇಶದಲ್ಲಿ ಮದ್ಯಪಾನ ಮಾಡುವುದು ಅಥವಾ ಹೆಣ್ಣು ಮಕ್ಕಳೊಂದಿಗೆ ಇರುವುದು ಸುರಕ್ಷತೆಯ ದೃಷ್ಟಿಯಿಂದಲೂ ಅಪಾಯಕಾರಿ. ರೈಲು ನಿಲ್ದಾಣಗಳಲ್ಲಿ ನಿರಾಶ್ರಿತರು ಇರುವುದು ಸಹಜ. ಆದರೆ ರೈಲು ಹಳಿಗಳಲ್ಲಿ ರಾತ್ರಿ ಹೊತ್ತು ತಿರುಗಾಡುವುದು, ಮಾದಕ ದ್ರವ್ಯಗಳನ್ನು ಬಳಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
Advertisement
ನಗರದಲ್ಲಿ ಮಾದಕ ದ್ರವ್ಯಗಳ ಸಮಸ್ಯೆ ಹೆಚ್ಚಿದೆ. ಇದರಿಂದ ಯುವ ಸಮೂಹ ದಿಕ್ಕುತಪ್ಪುವ ಸಾಧ್ಯತೆ ಇರುವುದರಿಂದ ಅದನ್ನು ಬೇರು ಸಹಿತ ಕಿತ್ತು ಹಾಕುವ ಪ್ರಯತ್ನ ಮಾಡಲಾಗುವುದು. ಮಂಗಳೂರಿನಲ್ಲಿ ಪ್ರತಿನಿತ್ಯ ಅಲ್ಲಲ್ಲಿ ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನ ರಾತ್ರಿ ಹೊತ್ತಿನಲ್ಲೂ ತಿರುಗಾಡುತ್ತಿರುತ್ತಾರೆ. ಅವರ ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.