ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ಕೊಡುವ ಮಾತನ್ನಾಡಿದ್ದಾರೆ. ಇದು ಕಾಂಗ್ರೆಸ್ ಟೂಲ್‍ಕಿಟ್‍ನ ಇನ್ನೊಂದು ಭಾಗವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರು ಚೀನಾ ಹಾಗೂ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಕಾಂಗ್ರೆಸ್‍ನ ಈ ದುರುದ್ದೇಶ ಫಲ ಕೊಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಪ್ರತಿಷ್ಠೆ ಮಣ್ಣು ಪಾಲು ಮಾಡುವುದು, ವಿಶ್ವವಂದ್ಯ ಪ್ರಧಾನಿಯವರ ಘನತೆಗೆ ಧಕ್ಕೆ ತರುವ ದುರುದ್ದೇಶ ಇದರ ಹಿಂದಿದೆ. ಟೂಲ್‍ಕಿಟ್ ವಿಷಯದಲ್ಲಿ ಬಿಜೆಪಿ ಈಗಾಗಲೇ ಕಾಂಗ್ರೆಸ್ಸಿಗರ ದುರುದ್ದೇಶವನ್ನು ಜನರ ಗಮನಕ್ಕೆ ತಂದಿದೆ. ಇದು ಟೂಲ್‍ಕಿಟ್‍ನ ಮುಂದುವರಿದ ಭಾಗವಷ್ಟೇ, ಇದು ಸರ್ವಥಾ ಖಂಡನೀಯ ಎಂದರು.
ದಿಗ್ವಿಜಯ್ ಸಿಂಗ್ ಕ್ಲಬ್‍ಹೌಸ್ ಆ್ಯಪ್ ಮೂಲಕ ಸಂದರ್ಶನ ನೀಡಿದ್ದು, ಆ ಪಕ್ಷವು ಪಾಕಿಸ್ತಾನದ ಪರ ಇರುವುದು ಸ್ಪಷ್ಟಗೊಳ್ಳುತ್ತಿದೆ. ಆದ್ದರಿಂದ ಕಾಂಗ್ರೆಸ್ಸಿನ ಹೆಸರನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಐಎನ್‍ಸಿ) ಹೆಸರಿನ ಬದಲಾಗಿ `ಆ್ಯಂಟಿ ನ್ಯಾಷನಲ್ ಕ್ಲಬ್‍ಹೌಸ್’ (ಎಎನ್‍ಸಿ) ಎಂದು ಬದಲಿಸಿಕೊಳ್ಳಲಿ. ವಿದೇಶಿ ಮಾಧ್ಯಮ ಪ್ರತಿನಿಧಿ ಜೊತೆ ಸಂದರ್ಶನದಲ್ಲಿ ನರೇಂದ್ರ ಮೋದಿ ಅವರು ಅಧಿಕಾರ ಕಳೆದುಕೊಂಡರೆ ಎಂಬ ಊಹಾತ್ಮಕ ಪ್ರಶ್ನೆಗೆ ದಿಗ್ವಿಜಯ್ ಸಿಂಗ್ ಅವರು ಈ ಉತ್ತರ ನೀಡಿರುವುದು ಕಾಂಗ್ರೆಸ್‍ನ ಪಾಕ್ ಪರ- ಚೀನಾಪರ ನೀತಿಯ ಪ್ರತಿಬಿಂಬದಂತಿದೆ. ಅಲ್ಲದೆ ಜಮ್ಮು ಕಾಶ್ಮೀರದಲ್ಲಿ ಶಾಂತಿಯುತ ವಾತಾವರಣ ಬೇಡ ಎಂಬುದರ ಪ್ರತೀಕದಂತಿದೆ. ಈ ಸಂದರ್ಶನದಲ್ಲಿ ಇದೇ ಪ್ರಶ್ನೆ ಕೇಳಲು ಕಾಂಗ್ರೆಸ್‍ನ ಮುಖಂಡರು ಹೇಳಿರುವಂತಿದೆ ಅಥವಾ ದಿಗ್ವಿಜಯ್ ಸಿಂಗ್ ಅವರೇ ಈ ಪ್ರಶ್ನೆ ಕೇಳಲು ಮೊದಲೇ ಹೇಳಿರುವ ಸಾಧ್ಯತೆ ಇದೆ. ಇದು ಟೂಲ್‍ಕಿಟ್‍ನ ಮತ್ತೊಂದು ಭಾಗದಂತಿದೆ. ಈ ಕುರಿತು ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.
ವಿಶ್ವದಾದ್ಯಂತ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕು ಮತ್ತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಈ ಹಿಂದೆ ಕಾಂಗ್ರೆಸ್ ಮುಖಂಡರಾದ ಮಣಿಶಂಕರ್ ಅಯ್ಯರ್ ಅವರೂ ಪಾಕಿಸ್ತಾನದ ಸಂದರ್ಶನವೊಂದರಲ್ಲಿ ತಿಳಿಸಿದ್ದರು. 2014ರಲ್ಲಿ ಅಯ್ಯರ್ ಅವರು ಈ ಸಂದರ್ಶನ ಕೊಟ್ಟಾಗ ಈ ಹೇಳಿಕೆ ಕೇಳಿ ಟಿ.ವಿ. ಆ್ಯಂಕರ್ ಆತಂಕಗೊಂಡಿದ್ದರು. ಇದರಲ್ಲಿ ನಮ್ಮ ಪಾತ್ರ ಏನಿದೆ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದರು. ಇದು ಕಾಂಗ್ರೆಸ್ಸಿಗರ ಷಡ್ಯಂತ್ರವಲ್ಲದೆ ಮತ್ತೇನು? ಪಾಕಿಸ್ತಾನ ಪರ ಕಾಂಗ್ರೆಸ್ ಇರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ ಎಂದು ಅವರು ಪ್ರಶ್ನಿಸಿದ್ದಾರೆ. ಇದೇ ಮಣಿಶಂಕರ್ ಅಯ್ಯರ್ ಅವರು ಈ ಹಿಂದೆ ಜಮ್ಮು ಕಾಶ್ಮೀರವನ್ನು ಅಫಘಾನಿಸ್ತಾನಕ್ಕೆ ಹೋಲಿಸಿದ್ದರು ಎಂಬುದೂ ಗಮನಾರ್ಹ ಎಂದಿದ್ದಾರೆ.
ರಾಹುಲ್ ಗಾಂಧಿ ಅವರೂ 370ನೇ ವಿಧಿ ರದ್ದತಿ ಬಹುದೊಡ್ಡ ಪ್ರಮಾದ ಎಂದು ಟ್ವೀಟ್ ಮಾಡಿದ್ದರು. 2019ರ ಆಗಸ್ಟ್‍ನಲ್ಲಿ ಈ ಟ್ವೀಟ್ ಮಾಡಲಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಸಾವಿರಾರು ಜನರ ಹತ್ಯೆ ಆಗಿದೆ, ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎಂದಿದ್ದರು. ಇದಾದ ಎರಡು ದಿನಗಳ ಬಳಿಕ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಈ ಕುರಿತು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು, ಜಮ್ಮು ಕಾಶ್ಮೀರದ ಪರಿಸ್ಥಿತಿ ಚೆನ್ನಾಗಿಲ್ಲ ಎಂಬ ರಾಹುಲ್ ಗಾಂಧಿ ಅವರ ಟ್ವೀಟ್ ಅನ್ನೂ ಅವರು ಉಲ್ಲೇಖಿಸಿದ್ದರು. ಇದು ಪಾಕಿಸ್ತಾನ ಮತ್ತು ಕಾಂಗ್ರೆಸ್ ನಡುವಿನ ಗುಪ್ತ ಒಪ್ಪಂದಕ್ಕೆ ಸಾಕ್ಷಿ ಅಲ್ಲವೇ ಎಂದು ನಳಿನ್‍ಕುಮಾರ್ ಅವರು ಪ್ರಶ್ನಿಸಿದ್ದು, ಈ ಕುರಿತು ಕಾಂಗ್ರೆಸ್ ಮುಖಂಡರು ಸ್ಪಷ್ಟನೆ ಕೊಡಲಿ ಎಂದು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಅವರು ಕೋವಿಡ್ ಹೆಚ್ಚಳದ ಕುರಿತು 2020ರ ಫೆಬ್ರವರಿ 13ರಂದು ಟ್ವೀಟ್‍ನಲ್ಲಿ ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದ ಭಾಗ ಎಂದು ಭೂಪಟದಲ್ಲಿ ತೋರಿಸಿದ್ದರು. ಇದು ಕಾಂಗ್ರೆಸ್ಸಿಗರ ದೇಶವಿರೋಧಿ ಚಿಂತನೆಯ ಭಾಗವಲ್ಲವೇ ಎಂದು ಅವರು ಕೇಳಿದ್ದಾರೆ. ಪುಲ್ವಾಮಾ ದಾಳಿಯನ್ನು ನರೇಂದ್ರ ಮೋದಿ- ಇಮ್ರಾನ್ ಖಾನ್ ನಡುವಿನ ಮ್ಯಾಚ್ ಫಿಕ್ಸಿಂಗ್ ಎಂದು ಕಾಂಗ್ರೆಸ್ ನೇತಾರ- ನಮ್ಮ ರಾಜ್ಯದವರೇ ಆದ ಬಿ.ಕೆ.ಹರಿಪ್ರಸಾದ್ ಅವರು ಹೇಳಿದ್ದರು. ಇದು ನಮ್ಮ ದೇಶದ ಸೇನೆಯ ಧೈರ್ಯ ಸ್ಥೈರ್ಯವನ್ನು ಕುಂದಿಸುವ ಕಾಂಗ್ರೆಸ್ಸಿಗರ ದೇಶವಿರೋಧಿ ಮನಸ್ಥಿತಿಗೆ ಹಿಡಿದ ಕೈಗನ್ನಡಿ ಅಲ್ಲವೇ ಎಂದೂ ಪ್ರಶ್ನಿಸಿದ್ದಾರೆ.