ಮುಂಬೈ: ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಇನ್ನು ಮುಂದೆ ಶಿವಸೇನೆಯ ಶಾಸಕಿಯಾಗಲಿದ್ದಾರೆ.
ಹೌದು. ಮಹಾರಾಷ್ಟ್ರದಲ್ಲಿ ʼಮಹಾವಿಕಾಸ್ ಆಘಾಡಿʼ ಸರ್ಕಾರವಿದ್ದರೂ ಊರ್ಮಿಳಾ ಮಾತೋಂಡ್ಕರ್ ಶಿವಸೇನೆಗೆ ಸೇರ್ಪಡೆಯಾಗಲಿದ್ದಾರೆ. ಭಾನುವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಪ್ತ ಹರ್ಷಲ್ ಪ್ರಧಾನ್ ಈ ವಿಚಾರ ತಿಳಿಸಿದ್ದು, ಮಂಗಳವಾರ ಮುಖ್ಯಮಂತ್ರಿ ಸಮ್ಮುಖದಲ್ಲಿ ಶಿವಸೇನೆಗೆ ಸೇರಲಿದ್ದಾರೆ ಎಂದು ಹೇಳಿದ್ದಾರೆ.
ಪಕ್ಷಕ್ಕೆ ಆಗಮಿಸುತ್ತಿರುವ ಊರ್ಮಿಳಾ ಅವರಿಗೆ ಈಗಾಗಲೇ ಶಾಸಕ ಸ್ಥಾನ ನೀಡಲು ಶಿವಸೇನೆ ಮುಂದಾಗಿದೆ.
ರಾಜ್ಯಪಾಲರ ಕೋಟಾದಿಂದ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಲು 12 ಮಂದಿ ಹೆಸರನ್ನು ರಾಜ್ಯಪಾಲ ಬಿ ಎಸ್ ಕೊಶ್ಯರಿಗೆ ಮಹಾವಿಕಾಸ್ ಆಘಾಡಿ ಸರ್ಕಾರ ಕಳುಹಿಸಿದ್ದು, ಈ ಪಟ್ಟಿಯಲ್ಲಿ ಊರ್ಮಿಳಾ ಮಾತೋಂಡ್ಕರ್ ಹೆಸರಿದೆ ಎಂದು ವರದಿಯಾಗಿದೆ. ರಾಜ್ಯಪಾಲರು ಈ ಪಟ್ಟಿಯನ್ನು ಅಂಗೀಕರಿಸಬೇಕಿದೆ.
ಕಳೆದ ವರ್ಷದ ಮಾರ್ಚ್ 27 ರಂದು ಮಾತೋಂಡ್ಕರ್ ಕಾಂಗ್ರೆಸ್ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಪಕ್ಷದ ಆಂತರಿಕ ಭಿನ್ನಾಭಿಪ್ರಾಯಿಂದ 2019ರ ಸೆ.10 ರಂದು ಊರ್ಮಿಳಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.
ರಾಜೀನಾಮೆ ನೀಡಿದ ಸಂದರ್ಭದಲ್ಲೇ ಅವರು ಶಿವಸೇನೆಗೆ ಸೇರಲಿದ್ದಾರೆ ಎಂದು ಸುದ್ದಿಗಳು ಪ್ರಕಟವಾಗಿತ್ತು.ಈ ಕುರಿತು ಸ್ಪಷ್ಟನೆ ನೀಡಿದ್ದ ಅವರು, ಸದ್ಯ ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ಚಿಂತನೆ ಇಲ್ಲ. ಮಾಧ್ಯಮಗಳು ಈ ರೀತಿಯ ವರದಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದರು.