– ಅಳುವಿನ ಶಬ್ಧಕೇಳಿ ಶಿಶು ರಕ್ಷಣೆ
ತಿರುವನಂತಪುರಂ: ಕಸದ ರಾಶಿಯಲ್ಲಿ ಎಸೆದು ಹೋಗಿರುವ ಮಗುವನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ನಿನ್ನೆ ಕೇರಳದ ನಡ್ಕಲ್‍ನ ಮನೆಯೊಂದರ ಹಿಂದೆ ಇರುವ ಕಸದ ರಾಶಿಯೊಂದರಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾರೆ. ಮಗುವಿನ ಅಳುವನ್ನು ಕೇಳಿ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ.
ಸ್ಥಳೀಯರು ಮಗುವಿನ ಅಳುವ ಧ್ವನಿಯನ್ನು ಕೇಳಿ ಹುಡುಕಲು ಪ್ರಾರಂಭಿಸಿದ್ದಾರೆ. ಆಗ ಮಗು ಕಸದ ತೊಟ್ಟಿಯಲ್ಲಿರುವುದು ಕಂಡು ಬಂದಿದೆ. ಈ ಬಳಿಕ ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆಗ ತಾನೇ ಹುಟ್ಟಿದ ಶಿಶುವನ್ನು ಯಾರೋ ಕಸದ ತೊಟ್ಟಿಯಲ್ಲಿ ಎಸೆದು ಹೋಗಿದ್ದಾರೆ. ಈ ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. ನವಜಾತ ಶಿಶುವನ್ನು ಪಾರಿಹಳ್ಳಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಶಿಶು ಆರೋಗ್ಯವಾಗಿದೆ. ಮೂರು ಕೆಜಿ ತೂಕವನ್ನು ಹೊಂದಿದೆ. ಹಸುಳೆಯನ್ನು ಕಸದ ರಾಶಿಯಲ್ಲಿ ಬಿಟ್ಟು ಹೋದವರ ಕುರಿತಾಗಿ ಮಾಹಿತಿ ಇಲ್ಲ. ನಾವು ಪ್ರಕರಣ ದಾಖಲಿಸಿದ್ದೇವೆ. ಮಗು ಬಿಟ್ಟು ಹೋದವರು ಯಾರು ಎಂದು ತಿಳಿಯಲು ತನಿಖೆ ನಡೆಸುತ್ತೇವೆ. ಸದ್ಯ ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.