– ರಾಜ್ಯಕ್ಕೆ ತಮಿಳುನಾಡಿನಿಂದಲೂ ಶುರುವಾಗಿದೆ ತಲೆನೋವು
ಬೆಂಗಳೂರು: ಕಳ್ಳದಾರಿ ಮೂಲಕ ತಮಿಳುನಾಡಿನಿಂದ ಸಾವಿರಾರು ತಮಿಳಿಗರು ಕರ್ನಾಟಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.
ತಮಿಳುನಾಡಿನಲ್ಲಿ 9 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ. ಆದರೆ ಅಲ್ಲಿನ ಜನರು ಯಾವುದೇ ವೈದ್ಯಕೀಯ ತಪಾಸಣೆ ಇಲ್ಲದೇ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತಮಿಳುನಾಡಿನಿಂದ ಕೋಲಾರ ಹಾಗೂ ಚಿತ್ರದುರ್ಗದಲ್ಲಿ ಆತಂಕ ಶುರುವಾಗಿದೆ. ಈಗಾಗಲೇ ತಮಿಳುನಾಡಿನಿಂದ ಬಂದವರ ಪೈಕಿ ಕೋಲಾರದಲ್ಲಿ ಒಬ್ಬರು ಹಾಗೂ ಚಿತ್ರದುರ್ಗದಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ.
ಮುಖ್ಯ ರಸ್ತೆಗಳನ್ನು ಬಂದ್ ಮಾಡಿದ್ದರಿಂದ ತಮಿಳಿಗರು ಕರ್ನಾಟಕದ ಗಡಿ ಅತ್ತಿಬೆಲೆಯ ಬಳ್ಳೂರು ಗ್ರಾಮದ ಸುತ್ತಮುತ್ತಲಿನ ತೋಪುಗಳ ಮೂಲಕ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಕೆಲವೆಡೆ ರಸ್ತೆ ಮುಚ್ಚಿದರೂ ತೆರವು ಮಾಡಿಕೊಂಡು ಬರುತ್ತಿದ್ದಾರೆ. ಹಳ್ಳಕ್ಕೆ ಕಲ್ಲು ತುಂಬಿ ವಾಹನಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಶಿಫ್ಟ್ ಮಾಡುತ್ತಿದ್ದಾರೆ.
ತಮಿಳುನಾಡಿನ ಕೆಲ ಕುಡುಕರು ಮದ್ಯ ಖರೀದಿಗೆ ಬರಲು ಮಾಡಿಕೊಂಡ ದಾರಿಯಲ್ಲಿ ಸಾರ್ವಜನಿಕರು ಕೂಡ ನುಗ್ಗುತ್ತಿದ್ದಾರೆ. ಜನ ಓಡಾಡಲು ಸಾಧ್ಯವಾಗದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ಹೊತ್ತು ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪೊಲೀಸರು ಎಷ್ಟೇ ಕ್ರಮಕೈಗೊಂಡರೂ ತಮಿಳಿಗರು ಮಾತ್ರ ನಿರಾತಂಕವಾಗಿ ಓಡಾಡುತ್ತಿದ್ದಾರೆ.
ಈ ವಿಚಾರವಾಗಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಆನೇಕಲ್ ತಹಶೀಲ್ದಾರ್ ಮಹದೇವಯ್ಯ ಅವರು, ನಾವು ಈಗಾಗಲೇ ಮೂರು ಚೆಕ್‍ಪೋಸ್ಟ್ ಗಳಲ್ಲಿ ರಾಜ್ಯಕ್ಕೆ ಬರುತ್ತಿದ್ದ ತಮಿಳಿಗರನ್ನು ತಡೆದಿದ್ವಿ. ಆದರೆ ಈಗ ಮತ್ತೆ ಕಳ್ಳದಾರಿಯ ಮೂಲಕ ಬರುತ್ತಿದ್ದಾರೆ. ಬೆಳ್ಳೂರಿನಲ್ಲಿ ವ್ಯವಹಾರ ಇರುವುದರಿಂದ ಹಾಗೂ ಮದ್ಯ ಖರೀದಿಗೆ ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.