ಕಳೆದ ವರ್ಷ ಲಾಕ್‍ಡೌನ್ ಕಲಿಸಿದ ಉಪವಾಸ ಪಾಠ ಈ ಬಾರಿಯು ಮುಂದುವರೆಸಿದ ಕುಟುಂಬ

Public TV
2 Min Read
madikeri Fasting Family

ಮಡಿಕೇರಿ : ಕೊರೊನಾ ಹರಡದಂತೆ ತಡೆಯಲು ಕೇಂದ್ರ ಸರ್ಕಾರ 2020ರಲ್ಲಿ ಇಡೀ ದೇಶವನ್ನೇ ಸಂಪೂರ್ಣ ಲಾಕ್‍ಡೌನ್ ಮಾಡಿತ್ತು. ಆ ಸಂದರ್ಭ ಎಷ್ಟೋ ಲಕ್ಷಾಂತರ ಕುಟುಂಬಗಳು ನೋವು, ಸಂಕಷ್ಟ, ಅನುಭವಿಸಿದ್ದರು. ಇದರಿಂದ ಕೊಡಗು ಜಿಲ್ಲೆ ಏನು ಹೊರತಾಗಿರಲಿಲ್ಲ. ಅದೇ ರೀತಿಯಲ್ಲಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಗುಹ್ಯ ಗ್ರಾಮದ ಪವಿತ್ರನ್ ಎಂಬುವರ ಕುಟುಂಬ ಒಂದೊತ್ತಿನ ಊಟಕ್ಕೂ ಪರದಾಡಿತ್ತು. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ರಂಜಾನ್ ಉಪವಾಸ ಆಚರಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ಪವಿತ್ರನ್ ಕುಟುಂಬ ನೋಡಿತ್ತು. ಮುಸ್ಲಿಂ ಕುಟುಂಬಗಳು ಉಪವಾಸ ಮಾಡುವುದಾದರೆ ನಾವು ಯಾಕೆ ಉಪವಾಸ ಮಾಡಬಾರದು ಎಂದು ಪವಿತ್ರನ್ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಕಳೆದ ವರ್ಷದ ಲಾಕ್‍ಡೌನ್‍ನಲ್ಲಿ ಉಪವಾಸ ಆರಂಭಿಸಿದ್ದರಂತೆ.

madikeri Fasting Family2

ಲಾಕ್‍ಡೌನ್ ಮುಗಿದ ಬಳಿಕ ಪವಿತ್ರನ್ ಅವರಿಗೆ ಸಾಕಷ್ಟು ಕೂಲಿ ಕೆಲಸಗಳು ದೊರೆತ್ತಿವೆ. ಈಗ ಆಹಾರದ ಕೊರತೆ ಏನು ಇಲ್ಲ. ಆದರೂ ಪವಿತ್ರನ್ ಅವರ ಮಕ್ಕಳು ಕಳೆದ ಬಾರಿಯ ರಂಜನ್ ಸಂದರ್ಭದ ಉಪವಾಸವನ್ನು ನೆನೆದು ಈ ಬಾರಿಯೂ ಉಪವಾಸ ನಡೆಸುತ್ತಿದ್ದಾರೆ. ಕೊಡಗಿನಲ್ಲಿ ಕೊರೊನಾ ಸೋಂಕು ಮಿತಿಮೀರಿರುವುದರಿಂದ ಜಿಲ್ಲೆಯಲ್ಲಿ ವಾರದ ಐದು ದಿನ ಲಾಕ್‍ಡೌನ್ ಜಾರಿ ಮಾಡಿದೆ. ಹೀಗಾಗಿ  ಕುಟುಂಬಗಳು ಜಿಲ್ಲೆಯಲ್ಲಿ ಉಪವಾಸದಿಂದ ಬಳಲುತ್ತಿರಬಹುದು. ಕಳೆದ ಬಾರಿಯ ಲಾಕ್‍ಡೌನ್ ಸಂದರ್ಭದಲ್ಲಿ ನಾವು ಹಸಿವಿನಿಂದ ಬಳಲಿ, ಕೊನೆಗೆ ಉಪವಾಸವನ್ನೇ ಒಂದು ಆಚರಣೆಯಾಗಿ ಮಾಡಿಕೊಂಡಿದ್ದು ಇನ್ನೂ ನೆನಪಿದೆ. ಹೀಗಾಗಿ ಈ ಬಾರಿ ನಮ್ಮ ಮಕ್ಕಳು ಉಪವಾಸ ಮುಂದುವರೆಸುತ್ತಿದ್ದಾರೆ ಎನ್ನುತ್ತಾರೆ ಎಂದು ಪವಿತ್ರನ್ ಹೇಳಿದ್ದಾರೆ.

madikeri Fasting Family3

ಮುಂಜಾನೆ ಐದುವರೆಗೆ ಆಹಾರ ತಿನ್ನುವ ಪವಿತ್ರನ್ ಅವರ ಮಗಳು ಪ್ರಾಂಜನ್ ಮತ್ತು ಆಕೆಯ ತಂಗಿ ಇಬ್ಬರು ಉಪವಾಸ ಆರಂಭಿಸುತ್ತಾರೆ. ಬಳಿಕ ಸಂಜೆ ಆರುವರೆಗೆ ತಮ್ಮ ದೇವರಿಗೆ ಪೂಜೆ, ಮಾಡಿ ಪ್ರಾರ್ಥನೆಸಲ್ಲಿಸಿ ಬಳಿಕ ಏನನ್ನಾದರು ತಿಂದು ಉಪವಾಸ ಕೈಬಿಡುತ್ತಿದ್ದಾರೆ. ಇವರ ಈ ಆಚರಣೆ ನೋಡಿದರೆ ಒಮ್ಮೆ ಯಾರಿಗಾದರೂ ಇವರು ಮತಾಂತರ ಆಗುತ್ತಿರಬಹುದೇ ಎನ್ನೋ ಅನುಮಾನ ಕಾಡಬಹುದು. ಆದರೆ ಪವಿತ್ರನ್ ಅವರ ಮನೆಯ ಮುಂದೆ ತುಳಿಸಿಕಟ್ಟೆ ಇದ್ದು, ಇಂದಿಗೂ ಹಿಂದೂ ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕಳೆದ ಬಾರಿ ಲಾಕ್‍ಡೌನ್ ಸಂದರ್ಭದಲ್ಲಿ ತಾವು ಹಸಿವಿನಿಂದ ಬಳಲಿದ್ದನ್ನು ನೆನಪಿಸಿಕೊಂಡು ಈ ಕುಟುಂಬ ಇಂದಿಗೂ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವುದನ್ನು ರೂಢಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *