ಬಾಗಕೋಟೆ/ಕಲಬುರಗಿ: ಮದುವೆ ಸಮಾರಂಭಗಳಲ್ಲಿ ಭಾಗವಹಿಸಿದ ಜನರಿಗೆ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಸೇರುವ ಮದುವೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಆದೇಶ ಹೊರಡಿಸಿದ್ದಾರೆ.
ಡಿಸಿಎಂ ಗೋವಿಂದ ಕಾರಜೋಳ ಈ ಬಗ್ಗೆ ಪತ್ರ ಬರೆದು ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪರ್ಯಾಯವಾಗಿ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ಕಾರ್ಯಗಳನ್ನ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಕೊರೊನಾ ನಿಯಂತ್ರಣಕ್ಕೆ ಬಾರದಿರುವುದು ಆತಂಕಕಾರಿ ಸಂಗತಿಯಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗವಹಿಸುತ್ತಿದ್ದಾರೆ. ಇದರ ಪರಿಣಾಮದಿಂದ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೂ ಕೊರೊನಾ ಸೋಂಕು ಹರಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ಕಾರಣಕ್ಕಾಗಿ ಜಿಲ್ಲೆಯಲ್ಲಿ ಇನ್ನೂ ಮುಂದೆ ಜನ ಸೇರಿಸಿ ಮದುವೆ ಸಮಾರಂಭಗಳನ್ನು ಆಚರಿಸಲು ಅನುಮತಿ ನೀಡಬಾರದು. ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ಕಾರ್ಯಗಳನ್ನು ನಡೆಸಲು ಪರವಾನಿಗೆ ನೀಡುವಂತೆ ಸೂಚಿಸಿದೆ.
ಇತ್ತೀಚೆಗಷ್ಟೆ ಹಲವೆಡೆ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿದ ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಜನ ಸೇರುವ ಮದುವೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಕ್ರಮಗೊಳ್ಳಲಾಗಿದೆ.
ಈ ಬಗ್ಗೆ ಬಾಗಲಕೋಟೆ ಡಿಸಿ ಕೆ.ರಾಜೇಂದ್ರ ಸುದ್ದಿಗೋಷ್ಠಿ ನಡೆಸಿದ್ದು, ಜಿಲ್ಲೆಯಲ್ಲಿ ಮದುವೆ, ಸೀಮಂತ ಹಾಗೂ ಅಂತ್ಯಸಂಸ್ಕಾರ ಅವಾಂತರದಿಂದಲೇ 70ಕ್ಕೂ ಹೆಚ್ಚು ಪ್ರಕರಣಗಳು ಬಂದಿವೆ. ಕಲಾದಗಿ ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಮದುವೆ, ಇಳಕಲ್ ಮದುವೆ, ಡಾಣಕಶಿರೂರ ಸೀಮಂತ, ಚಿಕ್ಕಮ್ಯಾಗೇರಿ ರೈಲ್ವೆ ಟಿಕೆಟ್ ಕಲೆಕ್ಟರ್ ಅಂತ್ಯಸಂಸ್ಕಾರ ಈ ಪ್ರಕರಣಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ. ಈ ಪ್ರಕರಣಗಳಿಂದಲೇ 70ಕ್ಕೂ ಹೆಚ್ಚು ಪ್ರಕರಣ ಬಂದಿವೆ. ಇನ್ನೂ ಹೆಚ್ಚಿನ ಪಾಸಿಟಿವ್ ಪ್ರಕರಣ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಇದೆಲ್ಲ ಗಮನಿಸಿದ ಡಿಸಿಎಂ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ. ಡಿಸಿಎಂ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಮದುವೆ, ಸೀಮಂತ ಕಾರ್ಯ ನಿಷೇಧ ಮಾಡಲಾಗಿದೆ. ಮದುವೆಯಾಗುವವರು ಕೇವಲ ನೊಂದಣಾಧಿಕಾರಿ ಕಚೇರಿಗಳಲ್ಲಿ ಮಾತ್ರ ಮಾಡಿಕೊಳ್ಳಬೇಕು. ಯಾರೇ ಮರಣ ಹೊಂದಿದರು ತಾಲೂಕಾಡಳಿತದ ಮತ್ತು ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಡಿಸಿ ಸೂಚನೆ ನೀಡಿದರು.