ಕಲಬುರಗಿ: ಬೇಸಿಗೆ ಕಾಲದಲ್ಲಿ ಹೆಚ್ಚು ಬೇಡಿಕೆ ಇರುವ ಹಣ್ಣು ಕಲ್ಲಂಗಡಿ. ಸಾಧಾರಣ ಕೆಂಪು ಬಣ್ಣದ ಕಲ್ಲಂಗಡಿಯಯನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಕಲಬುರಗಿಯ ಯುವಕನೋರ್ವ ಮಲೇಷಿಯಾ ದೇಶದ ಹಳದಿ ತಳಿಯ ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡಿದ್ದಾನೆ.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದ ಬಸವರಾಜ್ ಪಾಟೀಲ್ ಬಿ.ಕಾಂ ಪದವಿಧರನಾಗಿದ್ದರು. ಕೃಷಿಯಲ್ಲಿ ಏನಾದರು ಹೊಸತನವನ್ನು ಕಂಡು ಹಿಡಿದು ಸಾಧನೆ ಮಾಡಬೇಕು ಎಂಬ ಹಂಬಲದಿಂದ ಕೃಷಿಯತ್ತ ಮುಖ ಮಾಡಿದ್ದರು. ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆ ಅತೀ ಹೆಚ್ಚು ಮಾರಾಟವಾಗುವ ಕಲ್ಲಂಗಡಿ ಹಣ್ಣಿನಲ್ಲಿ ಹೊಸ ತಳಿಯ ಹಣ್ಣನ್ನು ಬೆಳೆಯಬೇಕು ಎಂದು ನಿರ್ಧರಿಸಿದ್ದರು. ಅದರಂತೆ ತನ್ನ ಸ್ನೇಹಿತರ ಜೊತೆ ಚರ್ಚಿಸಿ 2 ಎಕರೆ ಪ್ರದೇಶದಲ್ಲಿ ಮಲೇಷಿಯಾದಲ್ಲಿ ಬೆಳೆಯುವ ಹಳದಿ ಕಲ್ಲಂಗಡಿ ತಳಿಯ ಹಣ್ಣನ್ನು ಬೆಳೆದಿದ್ದಾರೆ. ಇದೀಗ ಈ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದ್ದು, ಮಾರುಕಟ್ಟೆಯಲ್ಲಿ ಹಳದಿ ಬಣ್ಣದ ಕಲ್ಲಂಗಡಿಗೆ ಫುಲ್ ಡಿಮ್ಯಾಂಡ್ ಬಂದಿದೆ.
ಹಳದಿ ಬಣ್ಣದ ಕಲ್ಲಂಗಡಿ ಕೆಂಪು ಕಲ್ಲಂಗಡಿಗಿಂತ ಅತ್ಯಂತ ರುಚಿಕರವಾಗಿದೆ ಹಾಗೂ ಹೆಚ್ಚು ಇಳುವರಿ ಸಹ ಬರುತ್ತದೆ. ಕೆಂಪು ಕಲ್ಲಂಗಡಿ ಹೊಲ್‍ಸೇಲ್ ದರದಲ್ಲಿ ಪ್ರತಿ ಕೆಜಿಗೆ 6 ರಿಂದ 8 ರೂಪಾಯಿವರೆಗೆ ಮಾರಾಟವಾದರೆ, ಮಲೇಷಿಯಾ ತಳಿಯ ಈ ಹಳದಿ ಕಲ್ಲಂಗಡಿ ಪ್ರತಿ ಕೆಜಿಗೆ 15 ರೂಪಾಯಿ ಮಾರಾಟವಾಗುತ್ತಿದೆ. ಕಲಬುರಗಿಯ ಈ ಯುವಕ ಹಳದಿ ಕಲ್ಲಂಗಡಿ ಬೆಳೆದು ಯಶಸ್ಸು ಕಂಡಿದ್ದಾರೆ.
ಸದ್ಯ ಕಲಬುರಗಿಯ ಈ ವಾಟರ್ ಮೆಲನ್ ಹೈದರಾಬಾದ್ ಹಾಗೂ ಮುಂಬೈ ನಗರಗಳಲ್ಲಿ ಮಾರಾಟವಾಗುತ್ತಿದೆ. ಇಂದಿನ ದಿನಗಳಲ್ಲಿ ಕೃಷಿ ಬಿಟ್ಟು ಉದ್ಯೋಗಕ್ಕಾಗಿ ಪಟ್ಟಣ ಸೇರಿ ಕೈ ಸುಟ್ಟುಕೊಳ್ಳುತ್ತಿರುವ ಯುವಕರಿಗೆ ಕಲಬುರಗಿಯ ಬಸವರಾಜ್ ಮಾದರಿಯಾಗಿದ್ದು, ಕೃಷಿಯಲ್ಲಿಯೇ ಮನಸ್ಸು ಮಾಡಿದ್ರೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.