ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕರ್ನಾಟಕ ವಿದ್ಯುತ್ ಬೈಕ್, ಟ್ಯಾಕ್ಸಿ ಯೋಜನೆ-2021 ಅನಾವರಣಗೊಳಿಸಿದರು.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ಜಾರಿಯಿಂದ ರಾಜ್ಯದಲ್ಲಿ ಸ್ವಯಂ ಉದ್ಯೋಗ ಸೃಷ್ಟಿ, ಪರಿಸರ ಸ್ನೇಹಿ ವಾತಾವರಣ ನಿರ್ಮಾಣ, ಇಂಧನ ಉಳಿತಾಯದ ಪ್ರೋತ್ಸಾಹ, ನಗರ ಸಾರಿಗೆ ಬಲಪಡಿಸುವುದು, ಉದ್ದಿಮೆ ಸ್ಥಾಪನೆಗೆ ಪ್ರೋತ್ಸಾಹಿಸುವುದು, ಪ್ರಯಾಣಿಕರು ಮತ್ತು ಸಾರ್ವಜನಿಕ ಸಾರಿಗೆ ನಡುವೆ ಸಂಪರ್ಕ ಕಲ್ಪಿಸುವುದರ ಬಗ್ಗೆ ಈ ಯೋಜನೆಯು ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
Advertisement
ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳಲ್ಲಿ ಸಾರ್ವಜನಿಕರು ಬಸ್ ಮತ್ತು ರೈಲ್ವೆ, ಮೆಟ್ರೋ ನಿಲ್ದಾಣಗಳಿಂದ ಮನೆಗೆ ಮತ್ತು ಮನೆಯಿಂದ ಬಸ್ ಮತ್ತು ರೈಲ್ವೆ ನಿಲ್ದಾಣಗಳಿಗೆ ಸರಿಯಾದ ಸಮಯದಲ್ಲಿ ಪ್ರಯಾಣಿಸಲು ವ್ಯಯಿಸಬೇಕಾದ ಸಮಯ ಮತ್ತು ಶ್ರಮವನ್ನು ಕಡಿಮೆ ಮಾಡುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಅವರು ನುಡಿದರು.
Advertisement
Advertisement
ವಾಹನಗಳ ಚಾಲನೆಗೆ ಸಾಂಪ್ರದಾಯಿಕ ಇಂಧನಗಳ ಬಳಕೆಯಿಂದಾಗಿ ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ಆಗಿರುವ ಅಧ್ಯಯನಗಳ ಹಿನ್ನೆಲೆಯಲ್ಲಿ ಪರ್ಯಾಯ ಇಂಧನಗಳನ್ನು ಬಳಸುವ ಮೂಲಕ ಸ್ವಚ್ಛ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಸದುದ್ದೇಶದಿಂದ ವಿವಿಧ ಪರ್ಯಾಯ ಇಂಧನಗಳ ಬಳಕೆಗೆ ಸರ್ಕಾರವು ಉತ್ತೇಜನ ನೀಡುತ್ತಾ ಬಂದಿದೆ. ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು ರೂಪಿಸಿದ ರಾಜ್ಯ ಕರ್ನಾಟಕ. ಇದೀಗ ಮತ್ತೊಂದು ಹೆಜ್ಜೆ ಮುಂದುವರಿದು, ರಾಜ್ಯದ ಪ್ರಮುಖ ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021ನ್ನು ರಾಜ್ಯದಲ್ಲಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಅವರು ವಿವರಿಸಿದರು. ಇದನ್ನೂ ಓದಿ: ನಾಳೆಯಿಂದ ಪಿಯುಸಿ ಕಾಲೇಜುಗಳು ಪ್ರಾರಂಭ- ಆನ್‍ಲೈನ್ ಮೂಲಕ ಪಠ್ಯ ಬೋಧನೆ
ಈ ಯೋಜನೆಯಲ್ಲಿ ಕಂಪನಿಗಳು, ಪಾಲುದಾರಿಕೆ ಕಂಪನಿಗಳು ಮತ್ತು ವೈಯಕ್ತಿಕ ಪ್ರಜೆಗಳೂ ಸಹ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಮತ್ತು ಉದ್ದಿಮೆದಾರರು ಮುಕ್ತವಾಗಿ ಈ ಯೋಜನೆ ಸದುಪಯೋಗ ಪಡೆಯಬೇಕೆಂಬ ಉದ್ದೇಶದಿಂದ ಸರ್ಕಾರವು ಹಲವಾರು ರಿಯಾಯಿತಿಗಳನ್ನು ನೀಡಿರುತ್ತದೆ. ಸಾರಿಗೆ ವಾಹನಗಳಾಗಿ ನೋಂದಣಿಯಾಗುವ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಗಳಿಗೆ ಪರವಾನಿಗೆಯಿಂದ ವಿನಾಯಿತಿ ನೀಡುವುದು, ತೆರಿಗೆ ವಿನಾಯಿತಿ ನೀಡುವುದು, ಈ ವಾಹನಗಳ ಉತ್ಪಾದಕರಿಗೆ ಸಹಾಯಧನವನ್ನು ನೀಡುವುದು ಸೇರಿದಂತೆ ಇನ್ನೂ ಹಲವಾರು ರಿಯಾಯಿತಿಗಳನ್ನು ನೀಡಲಾಗಿರುತ್ತದೆ. ವಾಹನ ಉತ್ಪಾದಕರು, ಉದ್ದಿಮೆದಾರರು ಮತ್ತು ಸಾರ್ವಜನಿಕರು ಈ ಯೋಜನೆಗಳ ಪ್ರಯೋಜನವನ್ನು ಪಡೆದು ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ವಲಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವಂತೆ ಹಾಗೂ ಮಹಿಳಾ ಉದ್ದಿಮೆದಾರರು ಈ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಯ ಅನುಕೂಲಗಳ ಕುರಿತು ಮಾಹಿತಿ ನೀಡಿದರು. ಸಮಾರಂಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.