ನವದೆಹಲಿ: ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಐಸಿಸ್ ಭಯೋತ್ಪಾದಕರಿದ್ದಾರೆ ಅನ್ನೋ ಬೆಚ್ಚಿ ಬೀಳುವ ಸುದ್ದಿಯನ್ನು ವಿಶ್ವಸಂಸ್ಥೆ ನೀಡಿದೆ.
ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್‍ಗೆ ಸೇರಿದ ಸುಮಾರು 150ರಿಂದ 200 ಐಸಿಸ್ ಭಯೋತ್ಪಾದಕರು ಕರ್ನಾಟಕ, ಕೇರಳದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂಬ ಭಯಾನಕ ವಿಚಾರವನ್ನು ವಿಶ್ವಸಂಸ್ಥೆ ತಿಳಿಸಿದೆ. ಕಳೆದ ವರ್ಷ ಮೇನಲ್ಲಿ ಐಸಿಸ್ ಭಾರತದಲ್ಲಿ ಹೊಸ ಪ್ರಾಂತ್ಯವನ್ನು ತೆರೆದಿದ್ದೇವೆ ಎಂದು ಹೇಳಿಕೊಂಡಿತ್ತು.
ವಿಶ್ವಸಂಸ್ಥೆಯ 26ನೇ ಅನಾಲಿಟಿಕಲ್ ಸಪೋರ್ಟ್ ಅಂಡ್ ಸ್ಯಾಂಕ್ಷನ್ಸ್ ಮಾನಿಟರಿಂಗ್ ತಂಡದ ವರದಿಯಲ್ಲಿ ಐಸಿಸ್, ಅಲ್‍ಖೈದಾ ಮತ್ತು ಅದರ ಸಹಚರ ಭಯೋತ್ಪಾದಕ ಗುಂಪುಗಳು ಈ 2 ರಾಜ್ಯಗಳಲ್ಲಿ ಸಕ್ರಿಯವಾಗಿವೆ. ಈ ಗುಂಪುಗಳನ್ನು ಭಾರತದ ಉಪಖಂಡದ ನೇತೃತ್ವ ವಹಿಸಿಕೊಂಡ ಅಲ್‍ಖೈದಾ ನಾಯಕ ಒಸಮಾ ಮಹಮ್ಮೂದ್ ಮುನ್ನಡೆಸುತ್ತಿದ್ದಾನೆ. ಇವರೆಲ್ಲರೂ ಉಗ್ರ ಆಸಿಮ್ ಉಮರ್ ಹತ್ಯೆಗೆ ಪ್ರತಿಕಾರವಾಗಿ ಭಾರಿ ದಾಳಿಗಳನ್ನು ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಇದನ್ನು ಓದಿ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ- ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೈನಿಕರು
ಅಲ್ ಖೈದಾ ಉಗ್ರ ಸಂಘಟನೆಯ ಭಾರತೀಯ ಉಪಖಂಡದ ಮುಖ್ಯಸ್ಥ ಅಸಿಮ್ ಉಮರ್ ನನ್ನು ಅಫ್ಘಾನಿಸ್ಥಾನದಲ್ಲಿ ಕಳೆದ ವರ್ಷ ಕೊಂದುಹಾಕಲಾಗಿತ್ತು. 2019 ಸೆಪ್ಟೆಂಬರ್ 23 ರಂದು ಹೆಲ್ಮಾಂಡ್ ಪ್ರಾಂತ್ಯದ ತಾಲಿಬಾನ್ ಕಾಂಪೌಂಡ್ ಮೇಲೆ ಅಮೇರಿಕಾ-ಅಫ್ಘನ್ ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಭಾರತೀಯ ಉಪಖಂಡದ ಅಲ್ ಖೈದಾದ ಮುಖ್ಯಸ್ಥ ಅಸಿಮ್ ಉಮರ್ ಮೃತಪಟ್ಟಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.