-ಉಡುಪಿ ಡಿಸಿಐಬಿ ಪೊಲೀಸರ ಕಾರ್ಯಚರಣೆ
ಉಡುಪಿ: ಕರ್ನಾಟಕದ ಉಚಿತ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಕೇರಳಕ್ಕೆ ಸಾಗಿಸುವ ದಂಧೆಯ ಮೇಲೆ ಉಡುಪಿ ಡಿಸಿಐಬಿ ಪೊಲೀಸರು ದಾಳಿ ಮಾಡಿದ್ದಾರೆ. ಸರ್ಕಾರ ಉಚಿತವಾಗಿ ಬಡವರಿಗೆ ಕೊಡುವ ಉಚಿತ ಅಕ್ಕಿಯನ್ನು ಕೇರಳಕ್ಕೆ ಸಾಗಿಸುವ ಐವರು ಚೋರರ ಬಂಧನವಾಗಿದೆ.
ಬಡವರು ಹಸಿದಿರಬಾರದು. ಮೂರೊತ್ತು ಊಟ ಮಾಡಬೇಕೆಂದು ಸರ್ಕಾರ ಉಚಿತ ಅಕ್ಕಿ ವಿತರಿಸುತ್ತಿದೆ. ಆದ್ರೆ ಸರ್ಕಾರದ ಅಕ್ಕಿ ಪಡೆದು ಕೆಲವರು ಅದನ್ನು ದಂಧೆಕೋರರಿಗೆ ಮಾರಾಟ ಮಾಡಿ ದ್ರೋಹ ಬಗೆಯುತ್ತಿದ್ದಾರೆ. ಇಂತಹ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಉಡುಪಿಯಲ್ಲಿ ಡಿಸಿಐಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿದ್ದು, ಅಕ್ಕಿ ಸಂಗ್ರಹ ಮತ್ತು ಕೇರಳಕ್ಕೆ ಮಾರಾಟ ಮಾಡುವ ದಂಧೆಗೆ ಬಲೆ ಬೀಸಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಕೋಟೇಶ್ವರದ ಅಕ್ರಮ ಅಕ್ಕಿ ದಾಸ್ತಾನು ಗೋಡಾನ್ ನಲ್ಲಿ ಸಂಗ್ರಹಿಸಿ ಇಟ್ಟಿದ್ದ 55 ಟನ್ ಅಂದ್ರೆ 55 ಸಾವಿರ ಕಿಲೋ ಅಕ್ಕಿಯನ್ನು ಸುಪರ್ದಿಗೆ ಪಡೆದಿದ್ದಾರೆ.
ಡಿಸಿಐಬಿ ಪೊಲೀಸ್ ಇನ್‍ಸ್ಪೆಕ್ಟರ್ ಮಂಜಪ್ಪ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಂಡದ ಜೊತೆ ತೆರಳಿ ರೈಡ್ ನಡೆಸಿದ್ದಾರೆ. ಸ್ಥಳದಲ್ಲಿದ್ದ ಐವರ ಬಂಧನವಾಗಿದ್ದು, ಕೆಲ ಖದೀಮರು ಪರಾರಿಯಾಗಿದ್ದಾರೆ. ಅಕ್ಕಿ ತುಂಬಿ ಕೇರಳಕ್ಕೆ ಹೊರಟಿದ್ದ ಲಾರಿ, ಅಕ್ಕಿ ವಶವಾಗಿದೆ. ಕಾರ್ಯಾಚರಣೆಯಲ್ಲಿ 2.75 ಲಕ್ಷ ರೂಪಾಯಿ ನಗದು ವಶವಾಗಿದ್ದು, ಸ್ಥಳದಲ್ಲಿದ್ದ ಮೂರು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಲಾರಿ ಸೇರಿ ಸುಮಾರು ಒಂದು ಕೋಟಿ ರುಪಾಯಿ ಸೊತ್ತು ವಶವಾಗಿದೆ ಎಂದು ಡಿಸಿಐಬಿ ಇನ್‍ಸ್ಪೆಕ್ಟರ್ ಮಂಜಪ್ಪ ಮಾಹಿತಿ ಕೊಟ್ಟಿದ್ದಾರೆ. ಬಂಧಿತರಾದ ಇಸ್ಮಾಯಿಲ್ ಬ್ಯಾರಿ, ಮುಸ್ತಫಾ ತೌಫಿಕ್, ಉಬೇದುಲ್ಲಾ, ಮಹಮ್ಮದ್ ಮೇಚ್ರಾ, ನಿಯಾಸ್ ಸರ್ಕಾರದ ಫ್ರೀ ರೇಶನ್ ಅಕ್ಕಿಯನ್ನು ಒಟ್ಟು ಮಾಡುತ್ತಿದ್ದರು. ಉಚಿತ ಅಕ್ಕಿಗೆ ಪುಡಿಗಾಸು ರೇಟ್ ಫಿಕ್ಸ್ ಮಾಡಿ ಖರೀದಿಸುತ್ತಿದ್ದರು. ಉಚಿತ ಅಕ್ಕಿಗೆ ಪಾಲಿಶ್ ಮಾಡಿ ಸೋನ ಮಸೂರಿಯ ಶೇಪ್ ಕೊಟ್ಟು ಕೇರಳಕ್ಕೆ ಸಪ್ಲೈ ಮಾಡುತ್ತಿದ್ದರು ಎಂದು ಪೊಲೀಸರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಖದೀಮರು ಕುಂದಾಪುರ ಮೂಡು ಗೋಪಾಡಿ ಮತ್ತು ಕೇರಳ ಮೂಲದವರಾಗಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯ ಆಗಬೇಕಿದೆ. ರಾಜ್ಯಾದ್ಯಂತ ಪೊಲೀಸರು ತಪಾಸಣೆ ಮಾಡಿದರೆ ದೊಡ್ಡ ಮಟ್ಟದ ಅಕ್ಕಿ ಮಾರಾಟ ಜಾಲ ಪತ್ತೆಹಚ್ಚಬಹುದು. ಉಣ್ಣುವ ಅನ್ನಕ್ಕೆ ದ್ರೋಹ ಬಗೆಯುವ ಜನರ ಮೇಲೂ ಸರ್ಕಾರ ಕಣ್ಣಿಡಬೇಕು.