ಕಾರವಾರ: ಕಾಡು ಹಾಗಲಕಾಯಿ ತರಲು ಹೋಗಿದ್ದ ವ್ಯಕ್ತಿಯ ಮೇಲೆ ಎರಡು ಕರಡಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಮುಂಡಗೋಡಿನ ನ್ಯಾಸರ್ಗಿ ಗ್ರಾಮದಲ್ಲಿ ನಡೆದಿದೆ. ತನ್ನ ಜೀವ ಉಳಿಸಿಕೊಳ್ಳಲು ಸೆಲ್ಫಿ ವೀಡಿಯೋ ಮಾಡಿ ಗ್ರಾಮಸ್ಥರಿಗೆ ಕಳುಹಿಸಿ ಸಹಾಯ ಕೋರಿ ನಂತರ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ.
Advertisement
ನ್ಯಾಸರ್ಗಿ ಗ್ರಾಮದ ನಿರಂಜನ್ (35) ಗಂಭೀರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದು, ನ್ಯಾಸರ್ಗಿ ಅರಣ್ಯದಲ್ಲಿ ಬೆಳಗ್ಗೆ 8 ಗಂಟೆ ವೇಳೆ ತನ್ನ ಎತ್ತು ಕಳೆದಿರುವುದನ್ನು ಹುಡುಕಾಟ ನಡೆಸಿದ್ದ. ಈ ವೇಳೆ ಕಳೆದು ಹೋದ ಎತ್ತುಗಳು ಸಿಕ್ಕ ಬಳಿಕ ಅವುಗಳನ್ನು ಹೊಡೆದುಕೊಂಡು ವಾಪಸ್ ಬರುತ್ತಿದ್ದ ವೇಳೆ ಕಾಡಿನಲ್ಲಿ ಕಾಡು ಹಾಗಲಕಾಯಿ ಕಂಡಿದ್ದು, ಅವನ್ನು ತರಲು ಹೋದಾಗ ಎರಡು ಕರಡಿಗಳು ಈತನ ಮೇಲೆ ದಾಳಿ ನಡೆಸಿವೆ. ತಲೆ, ಕೈ ಕಾಲುಗಳಿಗೆ ಸೇರಿದಂತೆ ವಿವಿಧೆಡೆ ಕಚ್ಚಿ ಗಂಭೀರ ಗಾಯಗೊಳಿಸಿದವು.
Advertisement
Advertisement
ಗಂಭೀರವಾಗಿ ಗಾಯಗೊಂಡರೂ ಕರಡಿಗಳಿಂದ ತಪ್ಪಿಸಿಕೊಂಡು ಅರಣ್ಯದಲ್ಲಿ ಮರವನ್ನೇರಿ ಕುಳಿತ ನಿರಂಜನ್, ಈ ವೇಳೆ ತನ್ನ ಸ್ಥಿತಿಯ ಬಗ್ಗೆ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ನಂತರ ಮೊಬೈಲ್ ಮೂಲಕ ಗ್ರಾಮಸ್ಥರಿಗೆ ವೀಡಿಯೋ ಕಳುಹಿಸಿ ಕರೆ ಮಾಡಿ ಕರಡಿ ದಾಳಿಯ ಬಗ್ಗೆ ತಿಳಿಸಿದ್ದಾನೆ.
Advertisement
ಕೂಡಲೇ ಸುಮಾರು 25ಕ್ಕೂ ಹೆಚ್ಚು ಗ್ರಾಮಸ್ಥರು ಅರಣ್ಯಕ್ಕೆ ಧಾವಿಸಿ ಗಾಯಾಳುವನ್ನು ಹುಡುಕಾಡಿ ಮುಂಡಗೋಡು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.