ಧಾರವಾಡ: ಕುಟುಂಬದೊಳಗಿನ ಜಗಳದ ಮಧ್ಯೆ ಯುವಕನೋರ್ವನನ್ನು ಆತನ ಚಿಕ್ಕಪ್ಪನೇ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.
26 ವರ್ಷದ ಆಕಾಶ್ ಕೋಟೂರ ಎಂಬಾತನೇ ಚಿಕ್ಕಪ್ಪನಿಂದ ಕೊಲೆಯಾದ ದುರ್ದೈವಿ. ಕೊಲೆ ಮಾಡಿರುವ ಆರೋಪಿಯನ್ನು ಪ್ರಕಾಶ್ ಕೋಟೂರ ಎಂದು ಗುರುತಿಸಲಾಗಿದೆ. ಆಕಾಶ್ ಆಗಾಗ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದನಂತೆ. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮನೆಯೊಳಗೆ ಇಂದು ಜಗಳ ನಡೆದಿದೆ. ನಂತರ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿ ಪ್ರಕಾಶ್ ಕಬ್ಬಿಣದ ಸಲಾಕೆಯಿಂದ ಆಕಾಶ್ ನ ತಲೆಗೆ ಹೊಡೆದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಆಕಾಶ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಕೊಲೆಯ ಸುದ್ದಿ ತಿಳಿಯುತಿದ್ದಂತೆ ಸ್ಥಳಕ್ಕೆ ಡಿಸಿಪಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಕಾಶ್‍ನನ್ನು ಆತನ ಚಿಕ್ಕಪ್ಪ ಪ್ರಕಾಶ್ ಕೊಲೆ ಮಾಡಿದ್ದು, ಈ ಕೊಲೆಗೆ ಕುಟುಂಬದೊಳಗಿನ ಜಗಳವೇ ಕಾರಣವಾಗಿದೆ, ಆಕಾಶ್ ಅಗಾಗ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಪ್ರಕಾಶ್ ಹಾಗೂ ಆಕಾಶ್ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಹಿಂದೆ ಬೇರೆ ಏನಾದರೂ ಬಲವಾದ ಕಾರಣ ಇದೆಯಾ ಎನ್ನುವ ಬಗ್ಗೆ ತನಿಖೆ ನಡೆಸಿ ಪತ್ತೆ ಮಾಡಲಾಗುವುದು. ಸದ್ಯ ಕೊಲೆ ಮಾಡಿರುವ ಪ್ರಕಾಶ್ ಪರಾರಿಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.