ಬೆಂಗಳೂರು: ಗಾನ ಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಇಂದು ವಿಧಿವಶರಾಗಿದ್ದು, ಹಲವು ಭಾಷೆಗಳಲ್ಲಿ ಹಾಡಿರುವ ಹಾಡುಗಳನ್ನು ನಾವಿಂದು ನೆನಪಿಸಿಕೊಳ್ಳಬಹುದು.
ಮೂಲತಃ ಕರ್ನಾಟಕದವರು ಅಲ್ಲದಿದ್ದರೂ ಅವರು ಕನ್ನಡವನ್ನು ಸುಲಲಿತವಾಗಿ ಮಾತನಾಡುತ್ತಿದ್ದರು. ಅವರು ಕೊನೆಯ ಬಾರಿ ಕನ್ನಡದಲ್ಲಿ ಕೊರೊನಾ ಕುರಿತ ಹಾಡು ಹಾಡಿ ಜನ ಮೆಚ್ಚುಗೆ ಪಡೆದಿದ್ದರು.
Advertisement
Advertisement
ಗೀತೆ ರಚನೆಕಾರರು ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಕೊರೊನಾ ಜಾಗೃತಿ ಕುರಿತಂತೆ ಗೀತೆಯೊಂದನ್ನು ರಚಿಸಿದ್ದು, ಅದಕ್ಕೆ ಎಸ್‍ಪಿಬಿ ದನಿಯಾಗಿದ್ದರು. ಈ ಜಾಗೃತಿ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದನ್ನೂ ಓದಿ: ಮುಂದಿನ ಜನ್ಮದಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡ್ತೀನಿ ಅಂದಿದ್ರು ಗಾನ ಗಂಧರ್ವ
Advertisement
ಜಯಂತ್ ಕಾಯ್ಕಿಣಿಯವರು ಕೇವಲ ಸಾಹಿತ್ಯ, ಸಿನಿಮಾ ಗೀತೆ ರಚಿಸುವುದು ಮಾತ್ರವಲ್ಲ, ಸಮಾಜದ ಆಗುಹೋಗುಗಳ ಕುರಿತು ಸಹ ಆಗಾಗ ಪ್ರತಿಕ್ರಿಯಿಸುತ್ತಿರುತ್ತಾರೆ. ಹಲವು ಸಂದರ್ಭಗಳಲ್ಲಿ ವಿವಿಧ ಸಲಹೆಗಳನ್ನು ಸಹ ನೀಡುತ್ತಾರೆ. ಹಲವು ಬಾರಿ ಅವರ ಗೀತೆಗಳ ಮೂಲಕವೇ ಜನರಲ್ಲಿ ಅರಿವು ಮೂಡಿಸುತ್ತಾರೆ. ಅದರಂತೆ ಕೊರೊನಾ ಬಗ್ಗೆ ಜಾಗೃತಿ ಗೀತೆಯನ್ನು ರಚಿಸಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸಿದ್ದರು. ಹೀಗಾಗಿ ಈ ಹಾಡಿಗೆ ಮಹತ್ವ ಇನ್ನೂ ಹೆಚ್ಚಾಗಿತ್ತು.
Advertisement
ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಹಲವರು ಈ ಕುರಿತು ಕಮೆಂಟ್ ಮಾಡಿದ್ದು, ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್, ಜಯಂತ್ ಕಾಯ್ಕಿಣಿಯವರು ಅರ್ಥಗರ್ಭಿತವಾಗಿ ಸಾಹಿತ್ಯ ಬರೆದಿದ್ದಾರೆ. ನೀವೂ ಅದಕ್ಕೆ ನ್ಯಾಯ ಒದಗಿಸಿದ್ದೀರಿ. ಕೇಳಲು ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಆಗಸ್ಟ್ 5ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‍ಪಿಬಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಅವರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಎಸ್‍ಪಿಬಿ ಅವರ ಮರಣದ ಬಳಿಕ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 4ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು ಎಂದು ತಿಳಿಸಿದೆ.