ಕನಸಾಗಿ ಉಳಿಯಲಿದ್ಯಾ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ

Public TV
3 Min Read
yediyurappa house project 3

ಶ್ರೀನಿವಾಸ ರಾವ್
ಬೆಂಗಳೂರು : ಸರ್ಕಾರ ಘೋಷಣೆ ಮಾಡೋ ಅದೆಷ್ಟೋ ಯೋಜನೆಗಳು ಘೋಷಣೆಯಾಗಿ ಕಣ್ಣಿಗೆ ಕಾಣದ ಹಾಗೇ ಮಾಯವಾಗಿ ಬಿಡುತ್ತವೆ. ಕೆಲ ಯೋಜನೆಗಳಂತೂ ಕಾರ್ಯರೂಪಕ್ಕೆ ಬರೋದೆ ಇಲ್ಲ. ಇನ್ನು ಕೆಲವು ಯೋಜನೆಗಳು ಕಾರ್ಯರೂಪಕ್ಕೆ ಬಂದ್ರು ಸರಿಯಾದ ಸಮಯಕ್ಕೆ ಕಾಮಗಾರಿಗಳು ಪೂರ್ಣಗೊಳ್ಳದೆ ಫಲಾನುಭವಿಗಳ ಕೈ ಸೇರೋಕೆ ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುತ್ತವೆ. ಸರ್ಕಾರಗಳ ಇಚ್ಛಾಶಕ್ತಿ, ಮಂತ್ರಿಗಳ ಅಸಡ್ಡೆ, ಸರ್ಕಾರ ಆರ್ಥಿಕ ಸ್ಥಿತಿಗಳು ಯೋಜನೆಗಳನ್ನ ಪೂರೈಸಲು ಅವಕಾಶ ಕೊಡೋದಿಲ್ಲ. ಈಗ ಈ ಸಾಲಿಗೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ “ಮುಖ್ಯಮಂತ್ರಿ ಒಂದು ಲಕ್ಷ ಮನೆ” ಯೋಜನೆ ಸೇರಿಕೊಂಡಿದೆ. ಯೋಜನೆ ಘೋಷಣೆ ಮಾಡಿ 3 ವರ್ಷ ಕಳೆದು ಇದೂವರೆಗೂ ಒಂದೇ ಒಂದು ಮನೆ ಸರ್ಕಾರದಿಂದ ಕಟ್ಟಲು ಆಗದೆ ಆಮೆಗತಿಯಲ್ಲಿ ಯೋಜನೆ ಸಾಗುತ್ತಿದೆ.

yediyurappa house project 1

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2018 ರಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆಯನ್ನು ಘೋಷಣೆ ಮಾಡಿದ್ರು. ಬೆಂಗಳೂರಿನಲ್ಲಿ ಸೂರು ಇಲ್ಲದ ಪ್ರತಿಯೊಬ್ಬರಿಗೂ ಕಡಿಮೆ ಬೆಲೆಯಲ್ಲಿ ಸೂರು ನೀಡುವ ಮಹತ್ವಾಕಾಂಕ್ಷೆಯ ಯೋಜನೆ ಇದು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯೋಜನೆ ಘೋಷಣೆ ಮಾಡಿದ್ರು ಅಷ್ಟೆ. ಯಾವುದೇ ಪ್ರಾರಂಭಿಕ ಕಾರ್ಯಗಳನ್ನ ಅನುಷ್ಠಾನ ಮಾಡಲಿಲ್ಲ. ನಂತರ ಸಿದ್ದರಾಮಯ್ಯ ಸರ್ಕಾರ ಪತನವಾಯ್ತು. ಬಳಿಕ ಬಂದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಖುದ್ದು ಕುಮಾರಸ್ವಾಮಿ ಅವ್ರು ಒಂದು ಲಕ್ಷ ಮನೆ ಯೋಜನೆಗೆ ಯಲಹಂಕ ಬಳಿಯ ಕುದುರೆಗೆರೆ ಗ್ರಾಮದಲ್ಲಿ ಮನೆಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ರು. ಕುಮಾರಸ್ವಾಮಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದು ಬಿಟ್ಟು ಉಳಿದ ಕೆಲಸಗಳು ಮುಂದಕ್ಕೆ ಸಾಗಲೇ ಇಲ್ಲ.

yediyurappa house project 2

ಕುಮಾರಸ್ವಾಮಿ ಸರ್ಕಾರ ಪತನದ ಬಳಿಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂತು. ಸಿಎಂ ಯಡಿಯೂರಪ್ಪ ದಾಸರಹಳ್ಳಿಯ ಗಾಣಿಗರಹಳ್ಳಿಯಲ್ಲಿ ಸುಮಾರು ಒಂದು ಸಾವಿರ ಮನೆಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ರು. ಶಂಕು ಸ್ಥಾಪನೆ ಮಾಡಿದ ವೇಗದಲ್ಲಿ ಮನೆಗಳ ನಿರ್ಮಾಣ ಮಾತ್ರ ಆಗಲೇ ಇಲ್ಲ. ಯೋಜನೆ ಘೋಷಣೆ ಆಗಿ 3 ವರ್ಷಗಳು ಕಳೆದು ಹೋಯ್ತು. ಹೀಗಿದ್ರು ಇದುವರೆಗೆ ಒಂದೇ ಒಂದು ಮನೆ ನಿರ್ಮಾಣವಾಗಿ, ಫಲಾನುಭವಿಗಳಿಗೆ ಮನೆ ಕೈ ಸೇರಿಲ್ಲ.

ಒಂದು ಲಕ್ಷ ಮನೆಗಳನ್ನು ಬಹುಮಹಡಿ ಮಾದರಿಯಲ್ಲಿ ಕಟ್ಟಬೇಕು ಅಂತ ಸರ್ಕಾರ ನಿರ್ಧರಿಸಿ ಕೆಲಸ ನಡೆಯುತ್ತಿದೆ. ಸದ್ಯ ಮೊದಲ ಹಂತದ ಪ್ಯಾಕೇಜ್ ನಲ್ಲಿ ಸುಮಾರು 46,499 ಜಿ+14 ಮಾದರಿಯ ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆದು 15 ಜನ ಗುತ್ತಿಗೆದಾರರಿಗೆ 15 ಪ್ಯಾಕೇಜ್ ನಲ್ಲಿ ಕೆಲಸ ನೀಡಿ ಕೆಲಸ ಪ್ರಾರಂಭ ಆಗಿದೆ. ಇನ್ನು ಎರಡನೇ ಹಂತದಲ್ಲಿ ಸುಮಾರು 53,501 ಮನೆಗಳನ್ನ ನಿರ್ಮಾಣ ಮಾಡಲು ಸರ್ಕಾರ ಚಿಂತಿಸಿದೆ. ಆದ್ರೆ ಈವರೆಗೂ ಸಂಪೂರ್ಣ ಕೆಲಸ ಪ್ರಾರಂಭ ಆಗಿಲ್ಲ. ಕೇವಲ 3264, ಜಿ+3 ಮಾದರಿ ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ.

dvg siddaramaiah

 

ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಮೊದಲ ಹಂತದ ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದೆ. ಮೊದಲ ಹಂತದ 49,499 ಮನೆಗಳ ನಿರ್ಮಾಣ ಕಾರ್ಯದಲ್ಲಿ ಒಂದೇ ಒಂದೇ ಒಂದು ಮನೆ ಸಂಪೂರ್ಣವಾಗಿ ನಿರ್ಮಾಣ ಆಗಿಲ್ಲ. 22,764 ಮನೆಗಳ ನಿರ್ಮಾಣ ಕಾರ್ಯ ಜಮೀನು ಸಮತಟ್ಟು ಮಾಡುವ ಹಂತದಲ್ಲಿ ಇದೆ. 3669 ಮನೆಗಳು ಮಣ್ಣು ಅಗೆತದ ಹಂತದಲ್ಲಿ ಇದೆ. 5250 ಮನೆಗಳು ತಳಪಾಯದ ಹಂತದಲ್ಲಿ ಇದೆ. 6524 ಮನೆಗಳು ಪ್ಲಿಂಥ್ ಮಟ್ಟದ ಹಂತದಲ್ಲಿದ್ರೆ 244 ಮನೆಗಳು ಛಾವಣಿ ಅಳವಡಿಸುವ ಹಂತದಲ್ಲಿ ಇವೆ. ಇದನ್ನೂ ಓದಿ: ಬಾಡಿಗೆ ಕಟ್ಟುವ ದರದಲ್ಲಿ ಇಎಂಐ ಕಟ್ಟಿ, ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಿ

HDK

ಬೆಂಗಳೂರಿನ ಸುತ್ತಮುತ್ತ ಸುಮಾರು 1200 ಎಕರೆ ಜಾಗದಲ್ಲಿ ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ ಸರ್ಕಾರ ಜಾಗ ಗುರುತಿಸಿ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದೆ. ಈಗಾಗಲೇ 4-5 ಕಡೆ ಜಾಗವನ್ನು ಗುರುತಿಸಿದೆ. ಆದ್ರೆ ಸಂಪೂರ್ಣವಾಗಿ ಜಾಗ ಗುರುತಿಸುವ ಕೆಲಸವನ್ನೆ ಸರ್ಕಾರ ಪೂರ್ಣ ಮಾಡಿಲ್ಲ. ಹೀಗಾಗಿ ಮನೆ ನಿರ್ಮಾಣ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ಸಾವಿರಾರು ಬಡವರು ಮನೆಯ ಕನಸ್ಸಿನಲ್ಲಿ ಕಾಯುತ್ತಿದ್ದಾರೆ. ಆದ್ರೆ ಸರ್ಕಾರದ ನಿರ್ಲಕ್ಷ್ಯದಿಂದ ಮನೆ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿಲ್ಲ. ಸರ್ಕಾರ ಕೆಲಸಕ್ಕೆ ವೇಗ ಕೊಟ್ಟರೆ ಮಾತ್ರ ಬಡವರ ಕನಸು ನನಸಾಗಲಿದೆ. ಇಲ್ಲದೆ ಹೋದ್ರೆ ಕನಸು ಕನಸಾಗೇ ಉಳಿಯೋದು ಗ್ಯಾರಂಟಿ.

Share This Article
Leave a Comment

Leave a Reply

Your email address will not be published. Required fields are marked *