– 1.49 ಕೋಟಿ ಮೌಲ್ಯದ ವಸ್ತುಗಳು ಮಾಲೀಕರಿಗೆ ವಾಪಸ್
ಮಂಗಳೂರು: ತಾವು ಕಷ್ಟಪಟ್ಟು ಗಳಿಸಿದ ವಸ್ತು ಕಳವಾದ ದುಃಖದಲ್ಲಿದ್ದರು. ಇನ್ನು ಆ ವಸ್ತುಗಳು ಸಿಗೋದೇ ಇಲ್ಲ ಅಂತ ಕೊರಗುತ್ತಿದ್ದರು. ಆದರೆ ಮಂಗಳೂರಿನ ಪೊಲೀಸರು ಇದೀಗ ಅವರ ದುಃಖವನ್ನೆಲ್ಲ ಮರೆಮಾಚಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ಮಾಡಿ ಎಲ್ಲರ ಮೊಗದಲ್ಲೂ ನಗು ಮೂಡುವಂತೆ ಮಾಡಿದ್ದಾರೆ.
ಹೌದು. ಮಂಗಳೂರಿನ ಪೊಲೀಸರು ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ ಕಳವು, ದರೋಡೆ ಪ್ರಕರಣವನ್ನು ಬೇಧಿಸಿ, ವಸ್ತುಗಳನ್ನು ಮರಳಿ ವಾರೀಸುದಾರರಿಗೆ ನೀಡಿದ್ದಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ನಡೆದ ಪ್ರಕರಣಗಳಲ್ಲಿ ನಗ ನಗದು ವಾಹನ ಕಳೆದುಕೊಂಡವರಿಗೆ ಮರಳಿ ಅವರವರ ವಸ್ತುಗಳನ್ನು ಪೊಲೀಸರು ನೀಡಿದ್ದಾರೆ.
ಮಂಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಆಭರಣ, ವಾಹನ, ನಗದು ಕಳೆದುಕೊಂಡವರ ಮುಖದಲ್ಲಿ ಧನ್ಯತಾ ಭಾವ ಎದ್ದು ಕಾಣುತಿತ್ತು. ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ನೇತೃತ್ವದಲ್ಲಿ ವಾರೀಸುದಾರರಿಗೆ ಮರಳಿ ಅವರ ವಸ್ತುಗಳನ್ನು ನೀಡಲಾಯಿತು.
ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮಾಡಿ ವರ್ಷದಲ್ಲಿ ಕಳವಾದ ವಸ್ತುಗಳನ್ನು ವಾರೀಸುದಾರರಿಗೆ ಮರಳಿಸಿದ್ದಾರೆ. ಈ ವರ್ಷ ಒಟ್ಟು 9.05 ಕೋಟಿ ಮೌಲ್ಯದ ವಸ್ತುಗಳು ಕಳುವಾಗಿದ್ದು, ಇದರಲ್ಲಿ 5.37 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಲಾಗಿದೆ. ಇದರಲ್ಲಿ 1.49 ಕೋಟಿ ಮೌಲ್ಯದ ವಸ್ತುಗಳನ್ನು ಮಾಲೀಕರಿಗೆ ನೀಡಲಾಗಿದೆ. ಒಟ್ಟು 2,277 ಕೆಜಿ ಚಿನ್ನ, 25 ದ್ವಿ-ಚಕ್ರ ವಾಹನಗಳು, 19 ಮೊಬೈಲ್, 48.13ಲಕ್ಷ ನಗದು ನ್ನು ವಾರೀಸುದಾರರಿಗೆ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ತಮ್ಮ ವಸ್ತುಗಳು ಕೊನೆಗೂ ನಮಗೆ ಸಿಕ್ಕಿದ ಖುಷಿಯಲ್ಲಿ ವಾರೀಸುದಾರರಿದ್ದರು. ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ವಸ್ತುಗಳನ್ನು ಕಳೆದುಕೊಂಡವರು ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು. ಒಟ್ಟಿನಲ್ಲಿ ಮಂಗಳೂರಿನ ಸೂಪರ್ ಕಾಪ್ ಗಳು ಶೌರ್ಯ ಮೆರೆದು ಮತ್ತೆ ಜನಸ್ನೇಹಿಯಾಗಿದ್ದಾರೆ. ಕಡಲನಗರಿಯ ಮಂದಿಗೆ ಖಾಕಿ ಮೇಲಿನ ಭರವಸೆಗೆ ಮತ್ತಷ್ಟು ಪುಷ್ಟಿ ಬಂದಿದೆ.